ಕಾಳಸಂತೆಯಲ್ಲಿಯೂ ಕಾವ್ಯ ಕಾಯ್ದಿರಿಸಿಕೊಂಡವರು ಗುಲ್ಜಾರ್ , ಚೂರು - ಪಾರು , ಅಲ್ಲಿ - ಇಲ್ಲಿ ಅವರ ಕವಿತೆಗಳನ್ನು ಓದಿದ್ದು ಬಿಟ್ಟರೆ ನಾನು ಅವರನ್ನು ಸಮಗ್ರವಾಗಿ ಕುಡಿದವನಲ್ಲ . ಕುಡಿತ ಕೆಲವೊಮ್ಮೆ ಸಂಪೂರ್ಣವಾಗಬೇಕಾದುದು ಇಲ್ಲ . ಖಾಲಿ ಗ್ಲಾಸಿನಲ್ಲಿಯ ಮಧ್ ಹೋಶಿ ಮರುಳಾಗದವನು ಕುಡಿದೂ ಭಾವ ಪರವಶತೆಗೆ ಏರಲಾರ . ಕುಡಿತದಲ್ಲಿ ಖಾಲಿತನಕ್ಕೆ ಎಷ್ಟು ಅರ್ಥವಿದೆಯೋ ಕಾವ್ಯದಲ್ಲಿ ನಿಶ್ಯಬ್ದಿಗೆ ಅಷ್ಟೇ ಘನತೆಯಿದೆ . ಅದು ಶಬ್ದದೊಳಗೆ ಕಾಣುವ ಸತ್ಯ . ಈ ಆಯಾಮವನ್ನು ತಮ್ಮ ಕಾವ್ಯದಲ್ಲಿ , ಬದುಕಿನಲ್ಲಿ ಸಾಧಿಸಿದವರು ಗುಲ್ಜಾರ್ . ಅವರ ಕಾವ್ಯಕ್ಕಿಗ ಫಾಲ್ಕೆ ದಕ್ಕಿದೆ . ಆದರೆ ಪ್ರಶಸ್ತಿ , ಪಾ ತೋಷಕಗಳ ಗಡಿಯನ್ನು ಉಲ್ಲಂಘಿಸುತ್ತ ಹೊರಡುವ ಗುಲ್ಜಾರ್ ಮತ್ತು ಅವರ ಕಾವ್ಯದ ಮೇಲೆ ಎಲ್ಲರ ಹಕ್ಕು ಇದೆ .
ಅವರ `ಮೀನಾಕುಮಾರಿ ಕಿ ಶಿಕವಾಯೆಂ' ಸಂಗ್ರಹದ ಕೆಲವು ಶಾಯರಿಗಳ ಭಾವಾನುವಾದ ಇಲ್ಲಿದೆ.
ಹುಚ್ಚು ಪ್ರೇಯಸಿ ನಾನು
ರಾತ್ರಿ ಕಳೆಯುತ್ತೇನೆ
ದುಃಖವೇ ನನ್ನ ವೈರಿ
ದುಃಖವೇ ಹಂಬಲ ಈ ಹೃದಯಕೆ
ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ
ನಾ ಹೇಗೆ ಬದುಕುವೆ?
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ,
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ
ಬದುಕುವುದೆಂದರೆ ಉಸಿರಾಟವೇ, ಅಲ್ಲ
ಈಗ ಹೃದಯಕ್ಕೆ
ನೋವಿನ ಭಾಧೆಯಿಲ್ಲ
ಕಣ್ಣಾಲೆಗಳಲ್ಲಿ ಮತ್ತಷ್ಟು
ಕಣ್ಣೀರಿಗೆ ಸ್ಥಳವಿಲ್ಲ
ಭಗ್ನ ಕನಸುಗಳು ಮಾತ್ರ
ನಿದ್ರಾಹೀನ ರಾತ್ರಿಗಳ
ಇರಿಯುತ್ತಲೇ ಇರುತ್ತವೆ
ಮುಳ್ಳುಗಳಂತೆ