Translate
Wednesday, 15 October 2014
Saturday, 19 July 2014
Sunday, 13 July 2014
ಇವಳೆಂದರೆ. . . .?!
ಇವಳ ಕುರಿತು
ಬರೆದಷ್ಟು ಕವಿತೆಗಳನ್ನು ದೇವರ ಕುರಿತೂ ಬರೆಯಲಿಲ್ಲ. ಕರೆದಲ್ಲಿ ಬಂದು ನಾನು ಕೈ ಹಿಡಿದವರನ್ನೆಲ್ಲ
ಒಡಹುಟ್ಟಿದವರಂತೆ ತಬ್ಬಿ, ತನ್ನಿಂದ ಸಾಧ್ಯವಾದುದನ್ನು ನೀಡಿ, ನಿರ್ಮೋಹಿಯಾದವಳು. ಹೋದಲೆಲ್ಲ ಕಸ ಗುಡಿಸಿ,
ಹೂ-ಗಿಡ ನೆಟ್ಟು, ಪ್ರಾರ್ಥನೆ-ಪೂಜೆಗಳನ್ನು ಮಾಡಿ, ಗೂಡುಗಳನ್ನು ಗುಡಿಗಳಾಗಿಸಿದವಳು. ಖಂಡಿತ, ಇವಳ
ಬಾಳೆನ್ನುವುದು ಹಲವರು ಸುರಿದ ಭಿಕ್ಷೆ, ಅಷ್ಟೆ ಸತ್ಯ, ಆ ಭಿಕ್ಷೆಯಿಂದ ಅವಳು ಅವರಿಗೆ ನೀಡಿದ ನೆಮ್ಮದಿಯ,
ಮರ್ಯಾದೆಯ, ಮೈ-ಮಾನದ ಅನ್ನ.
Saturday, 28 June 2014
Thursday, 26 June 2014
Monday, 23 June 2014
ಪ್ರೀತಿಯಂಥ ವಸ್ತು ಜಗದಲ್ಲಿ ಕಾಣೆ
ಎಲ್ಲ ಕಾಯುವಿಕೆ, ಕೂಡಿಸುವಿಕೆ, ಮತ್ತೆ ಮತ್ತೆ ಕ್ಷಮಿಸುವಿಕೆಗಳ ಹಿಂದೆ ಬರೀ ಕಾಸಿನ, ಕಾಮದ, ಲಾಭದ ಲೆಕ್ಕಾಚಾರಗಳೇ ಇರುವುದಿಲ್ಲ. ಪ್ರಪಂಚದಲ್ಲಿ ವಿನಾ ಕಾರಣ ಪ್ರೀತಿಸುವವರಿದ್ದಾರೆ. ಅವರೆಲ್ಲ ಬರೀ ಗಂಡಸರಲ್ಲ. ಅವರೊಳಗಿನ ತಾಯಿ ಅವರ ದೌರ್ಬಲ್ಯವಲ್ಲ. ಇಂಥ ಪ್ರೀತಿಯನ್ನು ಉಡಾಫೆ ಎಂದುಕೊಳ್ಳುವುದು ಉಡಿಯಲ್ಲಿ ಪಾಪ ಕಟ್ಟಿಕೊಳ್ಳುವುದು ಎರಡೂ ಒಂದೇ. ಇದು ಇನ್ನಾವುದೋ ಜನ್ಮಕ್ಕೆ ಕೈ ಕಳೆದುಕೊಳ್ಳುವ ಸುಳಿವು.
Saturday, 14 June 2014
ಬಳಸಿ ಬಿಸಾಡುವ ಕಾರ್ಪೊರೇಟ್. . .
ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ
ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ
ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ,
ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು
ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು
ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು
ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು
ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ
ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ
ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು
ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್
ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ
ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು
ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ
ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. ಮುಂದಿನ ಮರೀಚಿಕೆಯನ್ನು
ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ
ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ
ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ
ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ
ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.
Sunday, 4 May 2014
ಮೀನಾಕುಮಾರಿ, ಗುಲ್ಜಾರ್ ಮತ್ತು ಫಾಲ್ಕೆ…(meenakumari, Gulzar and Phalke)
ಅವರ `ಮೀನಾಕುಮಾರಿ ಕಿ ಶಿಕವಾಯೆಂ' ಸಂಗ್ರಹದ ಕೆಲವು ಶಾಯರಿಗಳ ಭಾವಾನುವಾದ ಇಲ್ಲಿದೆ.
ಹುಚ್ಚು ಪ್ರೇಯಸಿ ನಾನು
ರಾತ್ರಿ ಕಳೆಯುತ್ತೇನೆ
ದುಃಖವೇ ನನ್ನ ವೈರಿ
ದುಃಖವೇ ಹಂಬಲ ಈ ಹೃದಯಕೆ
ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ
ನಾ ಹೇಗೆ ಬದುಕುವೆ?
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ,
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ
ಬದುಕುವುದೆಂದರೆ ಉಸಿರಾಟವೇ, ಅಲ್ಲ
ಈಗ ಹೃದಯಕ್ಕೆ
ನೋವಿನ ಭಾಧೆಯಿಲ್ಲ
ಕಣ್ಣಾಲೆಗಳಲ್ಲಿ ಮತ್ತಷ್ಟು
ಕಣ್ಣೀರಿಗೆ ಸ್ಥಳವಿಲ್ಲ
ಭಗ್ನ ಕನಸುಗಳು ಮಾತ್ರ
ನಿದ್ರಾಹೀನ ರಾತ್ರಿಗಳ
ಇರಿಯುತ್ತಲೇ ಇರುತ್ತವೆ
ಮುಳ್ಳುಗಳಂತೆ
Saturday, 15 March 2014
ಜಡಿ ಮಳೆಯೆಂದರೆ ಧಾರವಾಡ..........
ಗುಡ್ಡ ಗುಡ್ಡ ಸ್ಥಾವರಲಿಂಗ ಮಾಡಿಧಾಂಗ ಅಭ್ಯಂಗ
-ದ. ರಾ. ಬೇಂದ್ರೆ
ಬದುಕಿನ ಒಂದೇ ಒಂದು ಕ್ಷಣ ಈ ನೆಲವನ್ನು ಬಳಸಿಕೊಂಡು ಹೋದವರಾರು ಹಾಡಿಕೊಳ್ಳದೇ ಉಳಿದಿಲ್ಲ, ಅಕ್ಷರ ಬಲ್ಲವರು ಬರಹಗಾರರಾಗದೇ ಉಳಿದಿಲ್ಲ, ಎಂಥ ಮಾಯಾನಗರಿ ಈ ಧಾರವಾಡ! ಎಷ್ಟೊಂದು ಸಮೃದ್ಧ ಇಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ. ಇದರ ಭಾವ ಶ್ರೀಮಂತಿಕೆಯನ್ನು ತಿಳಿಯಬೇಕದರೆ ನೀವು ಎಚ್.ಕೆ.ರಂಗನಾಥರ `ನೆನಪಿನ ನಂದನ’ ಆತ್ಮಕಥನವನ್ನು ಓದಬೇಕು. ಅವರು ಬರೆಯುತ್ತಾರೆ, “ ಅಂದು ನಾನು ಕಂಡ ಧಾರವಾಡವನ್ನು ಇಂದು ನೆನಪಿಸಿಕೊಂಡರೆ ನಿಜವಾಗಿಯು ಅದು ಭೂ ಸ್ವರ್ಗ. ಅಲ್ಲಿನ ಸಮೃದ್ಧವಾದ ಹಸಿರು, ಹೂವು, ಹಣ್ಣು-ಹಂಪಲು, ಈವರೆಗೆ ನಾನು ಅದಕೆ ಸರಿಸಾಟಿ ಕಂಡಿರಲಿಲ್ಲ. ಊರು ಸಣ್ಣದು, ಸಪ್ತಾಪುರ, ಎಮ್ಮೆಕೆರೆ, ಕೆಲಗೇರಿ, ಹಾಲಗೇರಿ ಮೊದಲಾದ ಅನ್ವರ್ಥಕ ಬಡಾವಣೆಗಳು. ಸಾಹಿತ್ಯ, ಕಾವ್ಯ, ನಾಟಕಗಳ ಹೆಪ್ಪು ನೆಲವೆಂದರೆ ಸಾಧನಕೇರಿ. ಆಲೂರು ವೆಂಕಟರಾಯರು, ಬೇಂದ್ರೆಯವರು, ಶಂಬಾರವರು, ಶ್ರೀರಂಗರು, ಕವಲಿಯವರು, ಹುಯಿಲಗೋಳ, ಇನಾಂದಾರ್, ಇವರ ಮನೆಗಳು ಇದ್ದದ್ದು ಅಲ್ಲಿಯೇ. ಕೆಲ ಮನೆಗಳಲ್ಲಿ ವಿದ್ಯುತ್ ದೀಪ ಕಂಡರೂ ರಸ್ತೆಗೆ ಬಂದಿರಲಿಲ್ಲ. ತಿಂಗಳ ಬೆಳಕು ಎಂದರೆ ಹಾಲಿನ ಹೊಳೆ. ಹುಣ್ಣಿಮೆಯ ರಾತ್ರಿ ಪುಸ್ತಕ ಹಿಡಿದು ಓದಬಹುದು. ಹಾಗೆಯೇ ಕೃಷ್ಣ ಪಕ್ಷದ ರಾತ್ರಿಯ ಕತ್ತಲು, ಹೆಪ್ಯ್ಪಗಟ್ಟಿದ ಕಗ್ಗತ್ತಲು, ಕಣ್ಣು ಮುಂದೆ ಕೈ ಹಿಡಿದರೂ ಬೆಳಕು ಕಾಣುವಂತಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ಎಲ್ಲೆಲ್ಲೂ ಗಿಡ-ಮರಗಳು, ಇಡಿ ರಾತ್ರಿ ಕೀಟ ಮೇಳದ ನಿಶಾಗಾನ, ಮಳೆಗಾಲದಲ್ಲಿನ ಸೋನೆ ಮಳೆ ದಿನ ದಿನಗಳವೆರೆಗೆ ಬಿಡುವುದಿಲ್ಲ. ಧಾರವಾಡದ ಜಡಿ ಮಳೆಯೆಂದರೆ ತಲೆಯನ್ನು ಹೊರಗೆ ಹಾಕುವಂತಿಲ್ಲ. ಅಲ್ಲಿನ ಮಿಂಚು- ಗುಡುಗು-ಸಿಡಿಲು ಎಂದರೆ `ಶ್ರಾವಣ ಬಂತು ಶ್ರಾವಣ’ ಎಂಬ ಕವಿತೆಯಲ್ಲಿ ಬೇಂದ್ರೆಯವರು ನುಡಿದಂತೆ ವಿರಾಟ ವೈಭವ.
ಇಂಥ ನಮ್ಮ ಧಾರವಾಡ ಅದೆಷ್ಟು ಯುಗಾದಿಗಳನ್ನು ಕಂಡಿದೆಯೋ, ಅದೆಷ್ಟು ಹಾಡು-ಹಬ್ಬದ ಸಂಭ್ರಮವನ್ನಾಚರಿಸಿಕೊಂಡಿದೆಯೋ ಇದು ಲೆಕ್ಕಕ್ಕೆ ಸಿಗದ ಲೆಕ್ಕ. ಆದರೆ ಪ್ರತಿ ಯುಗಾದಿಯ ಆದಿಯಲ್ಲೊಮ್ಮೆ ಈ ಬದುಕಿನ ಲೆಕ್ಕಾಚಾರ, ಆತ್ಮಾವಲೋಕನ ನಡೆದಿರಲಿಕ್ಕೆ ಸಾಕು, ಈ ಸಮ್ರುದ್ಧ ನೆಲಕ್ಕೊಮ್ಮೆ ದೂರ ದೂರದಿಂದ ಹಕ್ಕಿಗಳು ಬಂದು ಸೇರುವಂತೆ ಅದೆಷ್ಟೋ ಸೃಜನ ಶೀಲರು ಬಂದಿದ್ದಾರೆ. ಮರಳಿ ಹೋಗಿದ್ದಾರೆ. ಆದಾಗ್ಯೂ ಇದ್ಯಾವುದರಿಂದಲೂ ಅಭಾದಿತವಾಗದೇ ಇಲ್ಲಿ ನಿತ್ಯ ಹೂ ಅರಳುತ್ತಲೇ ಇವೆ. ನಿಸ್ಸಂಶಯವಾಗಿಯೂ ಅಂದಿನ ಧಾರವಾಡ ಇಂದಿಲ್ಲ, ಇಂದಿರುವುದು ನಾಳೆಯು ಇರಲಿಕ್ಕಿಲ್ಲವೇನೊ. ಪ್ರತಿ ಜನಾಂಗಕ್ಕೆ, ತಲೆಮಾರಿಗೆ ಹೊಸ ಸೊಬಗು, ಕನಸು, ಭರವಸೆಗಳಿರುವಂತೆ ನಮ್ಮ ಧಾರವಾಡಕ್ಕೂ. ಅಂತೆಯೇ ಈ ಮಾಯಾನಗರಿಯನ್ನು ಕುರಿತು ನಾನು ಹಾಡಿಕೊಂಡಿದ್ದೇನೆ-
“ನನ್ನೂರ ಧಾರವಾಡ
ನನ್ಹಿಂಗ ಕಾಡಬ್ಯಾಡ
ಎದೆಯಾಗ ನೂರು ತರದ
ತುಡಬುಡಕಿಯಾಡಬೇಡ”
ನನ್ಹಿಂಗ ಕಾಡಬ್ಯಾಡ
ಎದೆಯಾಗ ನೂರು ತರದ
ತುಡಬುಡಕಿಯಾಡಬೇಡ”
Friday, 24 January 2014
Sunday, 19 January 2014
ಬಲರಾಜ್ ಸಹಾನಿ(Balaraj Sahani) ನಿಮಗೆಷ್ಟು ಗೊತ್ತು....
![]() |
| Balaraj Sahani |
![]() |
| Balaraj Sahani |
ಈ ಬಲರಾಜ್ ಸಹಾನಿ ದಿನಕ್ಕೆ ಎರಡೇ ಎರಡು ತುಂಡು ಬ್ರೆಡ್ ತಿಂದು, ಕಲಕತ್ತೆಯ ಝೋಪಡಿಗಳಲ್ಲಿ ಸೈಕಲ್‍ವಾಲಾಗಳೊಂದಿಗೆ ವಾಸಿಸಿ ‘ಧೋ ಭೀಗಾ ಝಮೀನ’ ಮಾಡಿದ. ಅಬ್ಬಾಸರ ‘ಜುಬೈದಾ’ ನಾಟಕದಲ್ಲಿ ಕುದುರೆಯೊಂದಿಗೆ ‘ಬಾರಾತ್’ನ್ನು ವೇದಿಕೆಯ ಮೇಲೆ ತಂದು ವೈಶಿಷ್ಟ್ಯ ಮೆರೆದ. “ಆಖರೀ ಶ್ಯಾಮ್’ ದೊಳಗಿನ ತನ್ನ ಮಿರ್ಜಾ ಗಾಲಿಬನ ಪಾತ್ರಕ್ಕಾಗಿ ದೆಹಲಿಯ Tipical ಉರ್ದು ಭಾಷೆಯನ್ನು ಕಲಿತ, ಟ್ಯಾಗೋರರ ‘ಕಾಬೂಲಿವಾಲಾ’ದೊಳಗಿನ ಮಿಠಾಯಿ ಮಾರುವ ಪಠಾಣನ ಪಾತ್ರಕ್ಕಾಗಿ ರಾವಲ್‍ಪಿಂಡಿಯ ರಬಾಬ ನುಡಿಸುವುದನ್ನು ಕಲಿತ, ಎಂ.ಎಸ್.ಸತ್ಯು ನಿರ್ದೇಶನದ ‘ಗರಂಹವಾ’ ಸಿನಿಮಾದಲ್ಲಿಯ ಚಪ್ಪಲಿಯ ವ್ಯಾಪಾರಿಯ ಪಾತ್ರಕ್ಕಾಗಿ ಆಗ್ರಾದ ಮುಸ್ಲಿಂರೊಂದಿಗೆ ಚರ್ಮ ಹದ ಮಾಡಲು ಕಲಿತ, ಸಿನಿಮಾದ ಬಿಡುವಿನ ವೇಳೆಯಲ್ಲಿ ತನ್ನ ಮೂಲ ನೆಲವಾದ ಪಂಜಾಬಿನ ಜನಪದ ಸಾಹಿತ್ಯ ಹಾಡು, ಕತೆಗಳನ್ನು ಕಲೆಹಾಕಿದ, ಷಾಟ್‍ಗಳ ಮಧ್ಯದ ವಿರಾಮ ಕಾಲದಲ್ಲಿ ತನ್ನೊಂದಿಗೆ ಸದಾ ಹೊತ್ತೊಯ್ದಿರುತ್ತಿದ್ದ ಟೈಪ್‍ರೈಟರ್ ಸಹಾಯದಿಂದ ಮಾತೃಭಾಷೆಯಾದ ಗುರುಮುಖಿಯಲ್ಲಿ ಕತೆ, ನಾಟಕ, ಪತ್ರಿಕೆಗಳಿಗೆ ಲೇಖನ, ಪಾಕಿಸ್ತಾನಕ್ಕೆ ತನ್ನ ಭೆಟ್ಟಿ ಕುರಿತಾಗಿ ಪ್ರವಾಸ ಕಥನ, ಹೀಗೆ ಏನೆಲ್ಲ ಬರೆದ. ಬಲರಾಜ ಸಹಾನಿ ಎಂದರೆ ಕೆಲಸ, ಪ್ರಾಮಾಣಿಕತೆ ಹಾಗೂ ಬದ್ಧತೆ. ಬಲರಾಜ ಸಹಾನಿ ಎಂದರೆ ಇಂಗ್ಲಿಷ್, ಹಿಂದೀ, ಉರ್ದು, ಗುರುಮುಖಿ ಹಾಗೂ ಪಂಜಾಬಿನ ಸಾಹಿತ್ಯ ಹಾಗೂ ಸಂಸ್ಕೃತಿಯ ಸಂಗಮ. ಇಂಥ ಅಭೂತಪೂರ್ವ ವ್ಯಕ್ತಿಯನ್ನು ನೆನೆದು ಅಬ್ಬಾಸ್ ದಾಖಲಿಸಿದ ಈ ಸಾಲುಗಳನ್ನು ನೋಡಿ -
![]() |
| Balaraj Sahani |
“Balraj Sahani was
not an ivory tower intellectual and artist, his knowledge of the common people
was born out of his partcipation in the struggles of the people for freedom and
for union activities, while facing the brutal lathis and bullet-spouting rifles
of the police like Gorky, Life was his great university, jails provided the
post-graduate tutorials to Balaraj Sahani, the eternal student of life and of
the people”.
ಹೆಚ್ಚಿನ ಒದಿಗಾಗಿ- ಪರ್ದೇಸಿಯ ಫಿಲ್ಮಿ ಪಯಣ, ರಾಜಶೇಖರ ಮಠಪತಿ(ರಾಗಂ), ಕಣ್ವ ಪ್ರಕಾಶನ, ಬೆಂಗಳೂರು
Sunday, 15 December 2013
Wednesday, 16 October 2013
ನೀನು-ನಾನು
ನೀನು
ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ
ಹದ್ದಿನ ಬಾಯಿಂದ ಬಿದ್ದ
ಅರೆಜೀವದ ಮೀನು
ನಾನು
ಭೂ-ಬಸಿರ ಕೊಚ್ಚೆಯಲಿ ಹರಿದು
ಮತ್ತೆ ಮಡುಗಟ್ಟಿ, ಮಲೆತು
ಈಗ ಕೊಳವಾಗಿ ಉಳಿದುಕೊಂಡವನು
ಎಷ್ಟು ವಿಚಿತ್ರ !
ನೀರಿಗೇ ಬಿದ್ದರೂ
ನಿನಗೆ ಅಭಯವಿಲ್ಲ
ಮೀನಾಗಿ ಬಂದರೂ
ನನ್ನೊಳಗೆ ಸಂಸಾರವಿಲ್ಲ
ಇರುವಷ್ಟು ಕಾಲ
ಬಡಿದಾಡಬಹುದು
ಕೊಳಚೆ, ಕಣ್ಣೀರು ಬೆರೆಸಿ
ಹರಿದಾಡಬಹುದು
ಬರುವ ಸಾವನೇ
ಭಾಗ್ಯವೆಂದು ನೆಲವ ನಂಬಿ
ಪ್ರಾಣ ಕೊಟ್ಟು ಬಿಡಬಹುದು
ವ್ಯತ್ಯಾಸವಿಷ್ಟೇ
ನೀರೊಳಗೆ ಸತ್ತ ನೆಮ್ಮದಿ ನಿನಗೆ
ನೀರಾಗಿ ಜಲಚರವನೊಂದು ಕೊಂದ
ಹೆಗ್ಗಳಿಕೆ ನನಗೆ
ದಸರೆಯೊಳಗೆ ದಾಸಯ್ಯ
![]() |
| ದಸರೆಯೊಳಗೆ ದಾಸಯ್ಯ |
ಈ ದಸರೆಯೊಳಗೆ ನಿಂತ ದಾಸಯ್ಯ ನಾನು
ಸವರಿ ಹೋಗುವವರನೆಲ್ಲ ಕೇಳುತ್ತೇನೆ ಸರಿದಾರಿ
ಬೆಟ್ಟಕ್ಕೆ, ನನ್ನೊಳಗೆ ಸತ್ತ ಜಗದ್ಗುರುವಿನ ಚಟ್ಟಕ್ಕೆ
ಮಣ್ಣು ಮಾರಿ ಮೇಲೆ ಕುಳಿತು
ರಮ್ಮಿ ಆಡುತ್ತಿರುವ ರಾಜಕಾರಣಿಗಳ ಅಟ್ಟಕ್ಕೆ
ಸಾಧ್ಯವಾದರೆ,
ನನ್ನ ಕವಿತೆ ಕೂಡುವ ಕವಿಶೈಲದ ಮಟ್ಟಕ್ಕೆ
ಆದರೆ
ಹುಳಿಯುಂಡ ಮನಸ್ಸು ಹಳೆಯ
ಹಳವಂಡವನ್ನೇ ಹಾಡುತ್ತದೆ
ನೆನಪುಗಳ ನಾಯಿ ಕೂಗು
ನರ-ನರಗಳ ನುಡಿಸುತ್ತದೆ
ಈ ನನ್ನ ಮುಕ್ಕೋಟಿ ವರ್ಷಗಳ
ನನ್ನ ಮೈಗೆ ಮುತ್ತಿಟ್ಟ
ಈ ಮಾನಿನಿಯರಲ್ಲಿ ಮಾಯಿಯರೆಷ್ಟೋ
ತಾಯಿಯರೆಷ್ಟೋ, ತೆವಲಿನ ಹೆಂಗಸರೆಷ್ಟೋ
ಸೋಲು-ಗೆಲುವುಗಳ ಸೆಣಸಿದವರೆಷ್ಟೋ
ಸಂಸಾರ- ಸಾವು ಬಯಸಿದವರೆಷ್ಟೋ
ದಾರಿ ದೀಪದ ಹಾಗೆ ನಡೆಸಿದವರೆಷ್ಟೋ
ಹೆಜ್ಜೆ-ಹೆಜ್ಜೆಗೂ ಶಪಿಸಿ ಕೆಡಿಸಿದವರೆಷ್ಟೋ
ಲಜ್ಜೆ-ಲಾವಣ್ಯದ ಲಂಗ ಬಿಚ್ಚಿ ಬಾಳದೋಣಿಗೆ ಲಂಗರಾದವರೆಷ್ಟೋ
ಅಂಗ-ಅಂಗವೂ ಸವರಿ ಈ ಸಂಗ ಶಪಿಸಿದವರೆಷ್ಟೋ
ಸಂಗ ಸಿಗದಕ್ಕಾಗಿ ಸಾವ ಹಾರೈಸಿದವರೆಷ್ಟೋ
ಸುಡುಗಾಡು ಈ ಶಿವನ ತೊಡೆಯೇರಿದವರೆಷ್ಟೋ
ನನ್ನ ಸುಳ್ಳಿಗೆ ಸೋತು ಸುಖಿಸಿದವರೆಷ್ಟೋ
ಅದರೊಳಗೂ ಸತ್ಯದ ದೀಪ ಸುತ್ತಿ ಸತ್ತ ಚಿಟ್ಟೆಗಳೆಷ್ಟೋ
ಕರುಣಾಳು ಕೈ ನೀಡಿ ನಡೆಸಿದವರೆಷ್ಟೋ
ಶಿರಬಾಗಿ ತೇರೆಳೆದು ದೂರ ಉಳಿದವರೆಷ್ಟೋ
ಎಷ್ಟೊಂದು ಕಷ್ಟವೀ
ಮೈ-ಮುತ್ತಿನ ಲೆಕ್ಕ
ಮುಳುಗಿದಷ್ಟೂ ದ್ವಂದ್ವ
ಹಾಗೆಯೇ ಉಳಿಯುತ್ತದೆ
ಬಗೆಹರಿಯದೆ ಚೊಕ್ಕ
ಈಗ
ಈ ಹುಚ್ಚು ಲೆಕ್ಕವೇ ಬೇಡ
ಮುಳುಗಿದ್ದಕ್ಕೆ ಮಾತೂ ಬೇಡ
ಮುತ್ತಿನಿಂದ ಮಾಗಿದ ಮೈಗೆ
ಮೊಲೆ ಸವರಿ ಹೂವಾದ ಕೈಗೆ
ಲೆಕ್ಕವಿಡಲು ಒಕ್ಕಣಿಕೆ ಬೇಡ
ಬಂದವರು, ಬರಬೇಕಾದವರು
ಬಾರದೆಯೂ ಬೆಸೆದವರು ಎಲ್ಲ ಮುತ್ತಿಟ್ಟಿದ್ದಾರೆ
ಮುಕ್ಕೋಟಿ ವರ್ಷಗಳ ದೇಹಕ್ಕೆ
ಪ್ರೀತಿ ತೊಟ್ಟಿಲ ಕಟ್ಟಿ ಬಾಳು ಹರಸಿದ್ದಾರೆ
ನಿರ್ಗಮನದ ನನ್ನ ಯಾತ್ರೆಗೆ
ಹೆಗಲ ಹುಟ್ಟಿಸಿದ್ದಾರೆ
ನನ್ನ ಪ್ರೀತಿಯ ಮೈಗೆ
ಮುತ್ತಿನ ಗೋರಿ ಕಟ್ಟಿಸಿದ್ದಾರೆ
ಹೀಗೆ, ಹೀಗೆ ನೆನಪುಗಳೊಳಗೆ
ದಸರೆಗೆ ಬಂದವರು ದರ್ಬಾರು ಮುಗಿಸಿ
ಪೇರಿ-ಡೇರಿಗಳ ಭಿತ್ತಿಚಿತ್ರ ಕೀಳಿಸಿ
ಊರ ಸೇರುತ್ತಾರೆ
ದಾಸಯ್ಯ ನಾನು,
ಮರು ದಸರೆಗೆ ಮತ್ತೆ ಕಾಯುತ್ತೇನೆ
ಮತ್ತೆ ಕಾಯುತ್ತೇನೆ
Sunday, 13 October 2013
12/10/13 ರಂದು ದಸರಾ ಕವಿಗೋಷ್ಠಿಗೆ ಅಹ್ವಾನಿತನಾಗಿ ಹೋಗಿದ್ದೆ. ನಾನು ವಾಚಿಸಿದ ` ದಸರೆಯಲ್ಲಿ ದಾಸಯ್ಯ’ ಕವಿತೆಯ ವಿಡಿಯೋ ತುಣುಕು ನಿಮಗಾಗಿ... https://plus.google.com/114621774015207597475/posts/7i7fq8vXvcF
Monday, 30 September 2013
ಮಹಾತ್ಮ ಗಾಂಧಿ: ಬರೀ ಅಕ್ಟೋಬರ್ (October)2 ರ ನೆನಪೇ?...
![]() |
| Mahatma Gandi |
ಈ ಗಾಂಧಿ ಬರೀ ಒಂದು ದೇಹವಲ್ಲ ಎಂದು ನೀವು ಒಪ್ಪುವುದಾದರೆ ಈತನ ಪ್ರವಾಸ ಸಾವಿರಾರು ವರ್ಷಗಳ ಹಿಂದೆಯೆ ಶುರುವಾಗಿದೆ. ಇದು ಆತ್ಮವನ್ನು, ಅದರ ಅವಿನಾಶಿ ಜಂಗಮತ್ವವನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಅನ್ವಯವಾಗುವ ಮಾತೂ ಕೂಡ. ಈ ಲೆಕ್ಕಚಾರಗಳೆಲ್ಲ ಏನೇ ಇರಲಿ, ನಮಗೆ ಬೇಕಾಗಿಯೂ ಬೇಡಾಗಿಯೂ ನಮ್ಮ ಇತಿಹಾಸ, ವರ್ತಮಾನದ ಉದ್ಧರಣೆಯಾಗಿದ್ದಾನೆ ಗಾಂಧಿ. ಭವಿಷ್ಯದಿಂದಲೂ ಆತನನ್ನು ನಾವು ಧಿಕ್ಕರಿಸುವಂತಿಲ್ಲ. ರಜೆಯಾಗಿ, ಅಕ್ಟೋಬರ್ 2(October 2) ರ ಮೋಜಾಗಿ ಬಂದೇ ಬರುತ್ತಾನೆ ಗಾಂಧಿ. ಚೌಕು, ವೃತ್ತಗಳಲ್ಲಿ, ಕಾಲೇಜು, ಬಂದೀಖಾನೆಗಳಲ್ಲಿ, ಫೊಟೋ ಪುತ್ಥಳಿಯಾಗಿ, ಕಣ್ಣಿರಿಯುತ್ತಾನೆ ಗಾಂಧಿ. ಗುಂಡು-ಗೋಷ್ಠಿಗಳಲ್ಲಿ, ಸುಳ್ಳಿನ ಸಂತೆಯಲ್ಲಿ, ಕಾಳ ಸಂತೆಯಲಿ ಪುತ್ಥಳಿಯಾಗಿ ಮಾರಾಟವಾಗುತ್ತಾನೆ ಗಾಂಧಿ. ಉಪವಾಸದ ನಾಟಕಗಳಲ್ಲಿ, ಧರ್ಮಾರ್ಥ ಚಿಂತನೆಗಳಲ್ಲಿ ಸಾಕ್ಷಿಯಾಗುತ್ತಾನೆ ಗಾಂಧಿ. ಗಾಂಧಿಯಿಲ್ಲದ ಯಾವುದಾದರು ಸ್ಥಳ ಅಥವಾ ಆಲೋಚನೆಯನ್ನು ನಾವು ಕಲ್ಪಿಸಬಹುದೇ? ನನಗಿದು ಬಿಡಿಸಲಾಗದ ಪ್ರಶ್ನೆ. ಹೀಗೆಲ್ಲಾ ಗಾಂಧಿಯ ಬಗ್ಗೆ ವಿವೇಚಿಸುತ್ತಾ ಈ ಗಾಂಧಿಯನ್ನು ನಾವೆಲ್ಲಿಗೆ ಕರೆದೊಯ್ದೆವು? ನಮ್ಮ ಸಾಮಾಜಿಕತೆ ಮತ್ತು ರಾಜಕೀಯದ ಯಾವ ಅಳತೆಗೋಲಾಗಿ ಅವನನ್ನು ಇಟ್ಟುಕೊಂಡೆವು ನನಗೆ ತಿಳಿಯುತ್ತಿಲ್ಲ.
ನಾವು ಗಾಂಧಿಯನ್ನು, ಆತನ ವಿಚಾರಗಳನ್ನು ಅನುಸರಿಸಿದ್ದಕ್ಕಿಂತ ಆರಾಧಿಸಿದ್ದೇ ಹೆಚ್ಚು. ಈ ವ್ಯಕ್ತಿ ಆರಾಧನೆ, ಎಲ್ಲೋ ನಮ್ಮನ್ನು ಆತನಿಂದ, ಆತನನ್ನು ನಮ್ಮಿಂದ ದೂರ ಒಯ್ದು ನಿಲ್ಲಿಸಿಬಿಡುತ್ತದೆ. ಪ್ರಪಂಚದ ಎಲ್ಲ ಸಾಮಾಜಿಕ ಸುಧಾರಕರು ಈ ಕಾರಣಕ್ಕಾಗಿ ಅಲ್ಲವೇ ದೇವರಾಗಿರುವುದು! ನಮ್ಮ ಗಾಂಧಿ ಅವನ ಆಶಯಕ್ಕೂ ವಿರುದ್ಧವಾಗಿ ಮಹಾತ್ಮನಾಗುವುದು ಅವನ ಆರಾಧಕರಿಂದಲೇ. ಇರುವ ಒಬ್ಬ ಗಾಂಧಿಗೆ ಕೋಟಿ ಕೋಟಿ ಗಾಂಧಿಗಳನ್ನು ಕಲ್ಪಿಸಿಕೊಂಡು, ತಮ್ಮ ಹೃದಯಗಳಲ್ಲಿ ಇಟ್ಟುಕೊಂಡು ಪೂಜಿಸಿದರಲ್ಲಾ, ಇದನ್ನು ಏನೆನ್ನಬೇಕು? ಕಾಲದ ಅಂತರದಲ್ಲಿ ಕುಳಿತುಕೊಂಡು ನಾವೀಗ ಪ್ರಶ್ನಿಸಿಕೊಳ್ಳಬೇಕಿದೆ, ಗಾಂಧಿಯೂ ಒಬ್ಬ ಮನುಷ್ಯ ತಾನೇ? ಎಲ್ಲಾ ಆರೋಪ, ಅಪವಾದಗಳಿಂದ ಹೊರತಾದ ಗಾಂಧಿ ನಮ್ಮವನಾಗಲು ಸಾಧ್ಯವೇ? ದೇವರನ್ನೂ ತಮ್ಮ ಅಳತೆಯ ಲೆಕ್ಕಾಚಾರದಲ್ಲಿ ನೋಡುವ ಮನುಷ್ಯನಿಗೆ ಗಾಂಧಿಯ ಈ ಪರಿಯ ಆರಾಧನೆ ಸಮಂಜಸವೆನಿಸಿತೋ ಏನೋ ಗೊತ್ತಿಲ್ಲ. ಗಾಂಧಿ, ನಮ್ಮ-ನಿಮ್ಮೆಲ್ಲರ ಗಾಂಧಿ, ನೀವೂ ಪ್ರೀತಿಸಿಯೂ ಬದುಕಲಾರದ, ಒಪ್ಪಿಯೂ ಅನುಸರಿಸಲಾಗದ, ಆರಾಧಿಸಿಯೂ ಅಪ್ಪಲಾಗದ, ಕಲಿತು ಕಲಿಸಲಾಗದ ಈ ಗಾಂಧಿಯೇ ಒಂದು ವಿಚಿತ್ರ. ಆದರೆ ಆತ ದೇವರಾಗದೆ, ಮಹಾತ್ಮನಾಗಿರುವುದೇ ನನಗೆ ಒಂದಿಷ್ಟು ಸಮಾಧಾನ ತಂದಿದೆ. ಸಂತನೋ, ಮಹಾಂತನೋ ಅಥವಾ ಮಹಾತ್ಮನೋ ಇವರೆಲ್ಲಾ ಯಾವುದೇ ಪ್ರಮಾಣದ ಆರಾಧನೆಗೊಳಗಾಗಿಯೂ, ಮನುಷ್ಯರ ಲೋಕಕ್ಕೆ ಸಮೀಪವಾಗಿಯೇ ಉಳಿಯುತ್ತಾರೆ.
ನಾವು ಗಾಂಧಿಯನ್ನು, ಆತನ ವಿಚಾರಗಳನ್ನು ಅನುಸರಿಸಿದ್ದಕ್ಕಿಂತ ಆರಾಧಿಸಿದ್ದೇ ಹೆಚ್ಚು. ಈ ವ್ಯಕ್ತಿ ಆರಾಧನೆ, ಎಲ್ಲೋ ನಮ್ಮನ್ನು ಆತನಿಂದ, ಆತನನ್ನು ನಮ್ಮಿಂದ ದೂರ ಒಯ್ದು ನಿಲ್ಲಿಸಿಬಿಡುತ್ತದೆ. ಪ್ರಪಂಚದ ಎಲ್ಲ ಸಾಮಾಜಿಕ ಸುಧಾರಕರು ಈ ಕಾರಣಕ್ಕಾಗಿ ಅಲ್ಲವೇ ದೇವರಾಗಿರುವುದು! ನಮ್ಮ ಗಾಂಧಿ ಅವನ ಆಶಯಕ್ಕೂ ವಿರುದ್ಧವಾಗಿ ಮಹಾತ್ಮನಾಗುವುದು ಅವನ ಆರಾಧಕರಿಂದಲೇ. ಇರುವ ಒಬ್ಬ ಗಾಂಧಿಗೆ ಕೋಟಿ ಕೋಟಿ ಗಾಂಧಿಗಳನ್ನು ಕಲ್ಪಿಸಿಕೊಂಡು, ತಮ್ಮ ಹೃದಯಗಳಲ್ಲಿ ಇಟ್ಟುಕೊಂಡು ಪೂಜಿಸಿದರಲ್ಲಾ, ಇದನ್ನು ಏನೆನ್ನಬೇಕು? ಕಾಲದ ಅಂತರದಲ್ಲಿ ಕುಳಿತುಕೊಂಡು ನಾವೀಗ ಪ್ರಶ್ನಿಸಿಕೊಳ್ಳಬೇಕಿದೆ, ಗಾಂಧಿಯೂ ಒಬ್ಬ ಮನುಷ್ಯ ತಾನೇ? ಎಲ್ಲಾ ಆರೋಪ, ಅಪವಾದಗಳಿಂದ ಹೊರತಾದ ಗಾಂಧಿ ನಮ್ಮವನಾಗಲು ಸಾಧ್ಯವೇ? ದೇವರನ್ನೂ ತಮ್ಮ ಅಳತೆಯ ಲೆಕ್ಕಾಚಾರದಲ್ಲಿ ನೋಡುವ ಮನುಷ್ಯನಿಗೆ ಗಾಂಧಿಯ ಈ ಪರಿಯ ಆರಾಧನೆ ಸಮಂಜಸವೆನಿಸಿತೋ ಏನೋ ಗೊತ್ತಿಲ್ಲ. ಗಾಂಧಿ, ನಮ್ಮ-ನಿಮ್ಮೆಲ್ಲರ ಗಾಂಧಿ, ನೀವೂ ಪ್ರೀತಿಸಿಯೂ ಬದುಕಲಾರದ, ಒಪ್ಪಿಯೂ ಅನುಸರಿಸಲಾಗದ, ಆರಾಧಿಸಿಯೂ ಅಪ್ಪಲಾಗದ, ಕಲಿತು ಕಲಿಸಲಾಗದ ಈ ಗಾಂಧಿಯೇ ಒಂದು ವಿಚಿತ್ರ. ಆದರೆ ಆತ ದೇವರಾಗದೆ, ಮಹಾತ್ಮನಾಗಿರುವುದೇ ನನಗೆ ಒಂದಿಷ್ಟು ಸಮಾಧಾನ ತಂದಿದೆ. ಸಂತನೋ, ಮಹಾಂತನೋ ಅಥವಾ ಮಹಾತ್ಮನೋ ಇವರೆಲ್ಲಾ ಯಾವುದೇ ಪ್ರಮಾಣದ ಆರಾಧನೆಗೊಳಗಾಗಿಯೂ, ಮನುಷ್ಯರ ಲೋಕಕ್ಕೆ ಸಮೀಪವಾಗಿಯೇ ಉಳಿಯುತ್ತಾರೆ.
ಹೆಚ್ಚಿನ ಓದಿಗಾಗಿ: ‘ಗಾಂಧಿ:ಅಂತಿಮ ದಿನಗಳು’ ಮತ್ತು ‘ಗಾಂಧಿ:ಮುಗಿಯದ ಅಧ್ಯಾಯ’, ಕಣ್ವ ಪ್ರಕಾಶನ, ಬೆಂಗಳೂರು-
ಮೊಬೈಲ್ ಸಂಖ್ಯೆ: ೯೮೪೫೦೫೪೮೧
Subscribe to:
Posts (Atom)















