Translate

Saturday 15 June 2013

ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು:ಗಾಂಧಿ(Gandhi)

Mahatma Gandhi
“ಈ ಗಾಂಧಿ(Gandhi)ಯೊಂದಿಗೆ ಗುದ್ದಾಡುತ್ತಾ ನಾನೀಗ
 ಮಧ್ಯವಯಸ್ಸಿನ ಕದ ತಟ್ಟುತ್ತಿದ್ದೇನೆ. ಆದಾಗ್ಯೂ ಕಳೆದ 40 ವರ್ಷಗಳಿಂದ ಈತ ನನ್ನನ್ನು ಬೇಚೈನಾಗಿ ಉಳಿಸಿದ್ದಾನೆ ಎಂದರೆ ನೀವು ನಂಬಲಿಕ್ಕಿಲ್ಲ. ಅಲ್ಲಲ್ಲಿ ಮಿಣುಕು ದೀಪದಂತೆ, ಉರಿವ ದೀವಟಿಗೆಯಂತೆ, ಮುಗ್ಧವಾಗಿದ್ದ ನನ್ನಜ್ಜನಂತೆ, ಕೆಲವು ಸಲ ಬೇತಾಳದಂತೆ ಈ ಜೀವ ನನ್ನ ಜೀವನ ನಿರ್ಧಾರದ ಹಲವು ತಿರುವಿನ ಸಂದರ್ಭಗಳಲ್ಲಿಯೂ ಕುಣಿದಾಡಿ ಮಾಯವಾಗಿದೆ. ಗುಂಡಿನ ರಾತ್ರಿಗಳಲ್ಲಿ, ಆಲಿಂಗನದ ಆಟಗಳಲ್ಲಿ, ಸತ್ಯ-ಸುಳ್ಳುಗಳ ಬದುಕಿನ ಹಲವು ವಹಿವಾಟುಗಳಲ್ಲಿ, ಈತ ನನ್ನನ್ನು ಪೆಡಂಭೂತದಂತೆ ಬೆನ್ನಟ್ಟಿದ್ದಾನೆ. ಹಾಗೆಯೇ ನಿರ್ವೀಣ್ಯನಾಗಿ ಕುಸಿದು, ಕೊನೆಯುಸಿರಿನತ್ತ ಮನಸ್ಸು ಹೊರಳುವಾಗ ಜೋಹಾನ್ಸ್‍ಬರ್ಗ್‍ದ ಆ ರೈಲ್ವೆಸ್ಟೇಷನ್‍ನಿಂದ ನೇರವಾಗಿ ಎದುರು ಬಂದು ನಿಂತು `ಫಟಾರ್’ ಎಂದು ನನ್ನ ಮುಖಕ್ಕೆ ಹೊಡೆದಿದ್ದಾನೆ, ಎದೆಗೆ ಒದ್ದಿದ್ದಾನೆ. ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು ಎರಡೂ ಆಗಿರುವ ಮುಗ್ಧನಗೆಯ, ಸೋರೆಕಾಯಿಯಂಥ ತಲೆಯ, ಈ ಚಾಣಾಕ್ಷ ಮುದುಕ ನನ್ನ ಅತೀ ಪ್ರೀತಿಯ ವಸ್ತುಗಳಲ್ಲಿ ಒಂದಾಗಿದ್ದಾನೆ.”


Mahatma Gandhi
“ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ. ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಬಿಡಿಸಲಾಗದ ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ(Gandhi). ಹ್ಞಾಂ, ಅಂದ ಹಾಗೆ ಗಾಂಧಿ(Gandhi) ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‍ಗಳನ್ನಿಟ್ಟುಕೊಳ್ಳದೇ ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ(Gandhi). ಆದರೆ ಗಾಂಧಿವಾದವನ್ನೋದುವವರಿಗೆ ಗಾಂಧಿ(Gandhi) ಅರ್ಥವಾಗುವುದಿಲ್ಲ”


Mahatma Gandhi
“ಈ ಗಾಂಧಿ(Gandhi) ನಮಗೆ ಏನು ಹೇಳುತ್ತಾನೆ? ಎಂಬ ಒಂದು ಸಣ್ಣ ಕುತೂಹಲ ನನ್ನನ್ನು ಆತನ ಬೆನ್ನು ಬೀಳುವಂತೆ ಮಾಡಿತು.
ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧೀವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಫುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ(Gandhi) ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಟಿಯ ವೈಚಿತ್ರ್ಯ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೀಗೆ ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ(Gandhi) ನನ್ನ, ನಮ್ಮ ಹಾಗೂ ಪ್ರಪಂಚದ ಸಂವೇದನೆಗಳೊಳಗೆ.”


               ಹೆಚ್ಚಿನ ಓದಿಗಾಗಿ:- `ಗಾಂಧಿ: ಅಂತಿಮ ದಿನಗಳು’& 'ಗಾಂಧಿ:ಮುಗಿಯದ ಅಧ್ಯಾಯ' ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481

Thursday 13 June 2013

ಸಿನಿಮಾ ಅಂದರೆ ಹುಚ್ಚುತನ(Film means Madness)



 
K A Abbas in shooting spot
“ಸಿನಿಮಾ ಅಂದರೆ ಹುಚ್ಚುತನವಲ್ಲದೆ ಮತ್ತೇನು? ಯಾಕೆಂದರೆ ಇಲ್ಲಿ ಎಲ್ಲವೂ ಸತ್ಯದಂತೆ, ಆದರೆ ಸತ್ಯ ಅಲ್ಲ. ಯಶಸ್ಸನ್ನು ನಾಚಿಸುವ ಬದುಕಿನ ಯಶಸ್ಸು, ಸಾವೂ ಕೂಡಾ ಸಂಕಟ ಪಡುವಂಥ ಚಿತ್ರಣ ಸಿನಿಮಾದಲ್ಲಿ ಮಾತ್ರ ಸಾಧ್ಯವಲ್ಲವೇ?”
                                     -ಖ್ವಾಜಾ ಅಹಮ್ಮದ್ ಅಬ್ಬಾಸ್
Money makes the film, but money alone can not write the screenplay, money alone can not act, money alone can not adjust the lens that lends beauty and glamour to the famous and glamorous star-faces. Money is everything, But money is nothing!”
                                                       -Khwaja Ahamed Abbas
“Artists seldom make stable partners.  They are quick to fall in love and as unpredictably fall out of it. The heart of an artist is more delicate than the glass of the bottle. When the two clink and clash,  there is tragedy.
                                                                  
                                                       -Khwaja Ahamed Abbas
                                 

                                        ಹೆಚ್ಚಿನ ಓದಿಗಾಗಿ:- `ಪರದೇಸಿಯ ಫಿಲ್ಮಿ ಪಯಣ’, ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481

Wednesday 12 June 2013

ಶಬ್ದ ಸಂಭೋಗ

                      ಮಾತೊಳಗಿನ ಮೌನವೊ?                      
ಮೌನದೊಳಗಿನ ಮಾತೊ?
ಹುಡುಕುತ್ತ, ಹುಡುಕುತ್ತ
ಈ ಶಬ್ದ ಸಂಭೋಗ
ಸಾಕಾಗಿದೆ ನನಗೆ







ಹೇಳಿದಷ್ಟೂ ಹಾಳಾಗುತ್ತೇನೆ
ಹಾಳಾಗುತ್ತೇನೆ ಎಂದೇ ಹೇಳುತ್ತೇನೆ
ಹೇಳದೆ ಹಾಳಾಗುವುದಕ್ಕಿಂತ
ಹೇಳಿ ಹಾಳಾಗುವುದು ವಾಸಿಯೆಂದೊ
ಅಥವಾ
ಹಾಳಾಗಿಯೇ ಹೇಳುವುದು ಸರಿಯೆಂದೊ
ಕಾಯುತ್ತೇನೆ, ಮತ್ತೆ ಹೇಳುತ್ತೇನೆ



ಹೇಳಿಯೂ ಹಾಳಾಗಿ
ಹಾಳಾಗಿಯೂ ಹೇಳಿ
ಸುಮ್ಮನಿರಲಾಗದ್ದಕ್ಕೆ ಮತ್ತೆ ಹೇಳುತ್ತೇನೆ
ಮುಗಿಯಿತು, ಬರಿದಾಯ್ತು ಅಲ್ವೆ?
ಎಂದು ಕೇಳುತ್ತಲೆ
ಭಯ ಬೀಳುತ್ತೇನೆ
                                                        ಮತ್ತೆ ಹೇಳುತ್ತೇನೆ
  ಈಗ ಗೊತ್ತಾಗಿದೆ
ಮಾತೆನ್ನುವುದು ಖಾಲಿಕೊಡ
ದಿಟ್ಟಿಸಿ ನೋಡಿದರೆ ಜಾಲಿಗಿಡ
ಖಾಲಿಯಾಗಬೇಕೆನ್ನುವ ಬಯಕೆ
ನೆರಳಾಗಬೇಕೆನ್ನುವ ಕನವರಿಕೆ
                                      ಬರೀ ಒಂದು ಮರೀಚಿಕೆ
 ಹೆಚ್ಚಿನ ಓದಿಗಾಗಿ:- `ನಿಶಾಗಾನ’, ಕಣ್ವ ಪ್ರಕಾಶನ, ಬೆಂಗಳೂರು,ಮೊ-9845052481

Friday 7 June 2013

`ತಲ್ಲಣ' ಎಂದರೆ ಸಾದತ್ ಹಸನ್ ಮಾಂಟೊ(sadat hassan manto)

           `ತಲ್ಲಣ' ಎಂದ ತಕ್ಷಣ ನನಗೆ ತಟ್ಟನೆ ನೆನಪಾಗುವುದು ಸಾದತ್ ಹಸನ್ ಮಾಂಟೊ((sadat hassan manto).
Sadat Hassan Manto
ಕೇವಲ 42 ವರ್ಷ ಬದುಕಿದ್ದ ಬೆಂಕಿಯ ಕುಡಿಯಂಥ ಈ ಬರಹಗಾರ ಭಾರತದ ಮಧ್ಯಯುಗಿನ ಉತ್ತರಾರ್ಧ ಇತಿಹಾಸದ ತಲ್ಲಣಗಳಿಗೆ ಸಾಕ್ಷಿಯಾದವನು. ಮಾನವೀಯತೆಯ ಒಡೆಯಲಾಗದ ಪ್ರತಿಮೆಯನ್ನು ಪ್ರೀತಿಸಿದ್ದ ಈತ ಸಮಾಜ ದೂಷಿತ ಸ್ವೇಚ್ಛಾಚಾರಿಯಾಗಿದ್ದರಿಂದ `ಪಾಪಿ' ಎನಿಸಿಕೊಂಡಿದ್ದ. ಒಂದಿಷ್ಟು ಕಾಲ ಲಾಹೋರ್, ಮತ್ತಷ್ಟು ಕಾಲ ಬೊಂಬೆ, ಹೀಗೆ ಲೋಲಕದಂತೆ  ಒಡಾಡಿಕೊಂಡಿದ್ದ ಸಾದತ್ ಹಸನ್ ಮಾಂಟೊ ಆತನ ಕಾಲದ ಅಸಮಾಧಾನ, ವಿಷಾದ,ತಲ್ಲಣಗಳೇ ಮಡುಗಟ್ಟಿದ ಮಡುವಾಗಿದ್ದ. ಅದೇಕೊ ಗೊತ್ತಿಲ್ಲ, ಇಂಥ ಇನ್ನೊಬ್ಬ ಲೇಖಕ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಚರ್ಚೆಗೆ ಅರ್ಹನಿದ್ದಾನೆ ಎಂದು ನನಗೆ ಇದುವರೆಗೂ ಅನ್ನಿಸಿಲ್ಲ. ಹೀಗಾಗಿಯೇ ನನ್ನ ಪಾಲಿಗೆ `ತಲ್ಲಣ' ಎಂದರೆ ಮಾಂಟೊ. ಬೋದಿಲೇರನಿಗೆ ಬರೆದ ಮುನ್ನುಡಿಯಲ್ಲಿ ನನ್ನ ಈ ವಾದವನ್ನು ಸಮರ್ಥಿಸುವ ಲಂಕೇಶರ ಒಂದಿಷ್ಟು ಮಾತುಗಳಿವೆ. "ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಕಾವ್ಯಕ್ಕೆ ಕತ್ತು ಕೊಟ್ಟವರು ನಮ್ಮಲ್ಲಿ ಬಹಳ ಕಡಿಮೆ. ಪಶ್ಚಿಮದಲ್ಲಿ ಇಂಥವರ ಪಂಥವೇ ಇದೆ" ಎಂದಿದ್ದಾರೆ ಲಂಕೇಶ್(Lankesh). ಹೌದು, ಇದನ್ನು ನೀವೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದ ಇತಿಹಾಸದ ಅಗಣಿತ ವಿಪ್ಲವಗಳಿಗೆ ಮನಸ್ಸೊಡ್ಡಿದ ಬಂಗಾಲ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಬಿಹಾರ, ಕಾಶ್ಮಿರ ಹಾಗೂ ಪಂಜಾಬಗಳನ್ನು ಹೊರತುಪಡಿಸಿದರೆ ದಕ್ಷಿಣದ ಬಹುಪಾಲು ಬರಹಗಾರರು ಸಾವಿನ ಲೇಪನವಿಲ್ಲದೆ ಬರೆದವರು. ವ್ಯಕ್ತಿ ನೆಲೆಯಲ್ಲಿ ಮತ್ತು ಸಮಷ್ಟಿಯ ನೆಲೆಯಲ್ಲಿಯೂ ಸಂತೃಪ್ತಿಯ ಜಾಡನ್ನು ಹಿಡಿದುಕೊಂಡು ಹೋಗುವ ದಕ್ಷಿಣದ ಬರಹಗಾರ, ತಾಕಲಾಟದ ಸಂದರ್ಭಗೊಳಗಾಗಿದ್ದು ಕಡಿಮೆ ಎಂದುಕೊಂಡಿದ್ದೇನೆ ನಾನು. ಹಾಗೆ ನೋಡಿದರೆ ನಮ್ಮದನ್ನು ಬರಹಗಾರನ `ತಾಕಲಾಟ'ಗಳು ಎಂದುಕೊಳ್ಳುವುದು ಹೆಚ್ಚು ಉಚಿತ. ಇಲ್ಲಿ ತಲ್ಲಣಗಳ ಪ್ರಶ್ನೆ ಕಡಿಮೆ.
         ನಾನು `ತಾಕಲಾಟದ' ಅರ್ಥವನ್ನು ಮಾನಸಿಕ ಘರ್ಷಣೆ ಎಂದು ಗ್ರಹಿಸಿದ್ದೇನೆ. ಆದರೆ `ತಲ್ಲಣ'ದ ಅರ್ಥವ್ಯಾಪ್ತಿ ಬಹಳಷ್ಟು ಸಂಕೀರ್ಣ, ವಿಸ್ತ್ರತ ಹಾಗೂ ವಿಚಿತ್ರ. `ತಲ್ಲಣ' ಒಂದು ರೀತಿಯಲ್ಲಿ ಮನೋವ್ಯಥೆ, ತಾಪ, ಸಂಕಟ, ಕಕ್ಕಾಬಿಕ್ಕಿ, ಹೀಗೆ ಏನೇನೋ. ತಲ್ಲಣಕ್ಕೆ ಸಾಕ್ಷಿ `ಹೆರುವ ಹೊಳೆಯೊಳಗಿಳಿದ ಹೆಣ್ಣು' ಆಗಬಹುದೇನೋ. ತಾಕಲಾಟಕ್ಕೆ ಯಾವ ವ್ಯಾಪಾರಿ ಬುದ್ಧಿಯೂ ಸರಿಹೋದೀತು. ಕಾವ್ಯ ತಲ್ಲಣದ ಕೂಸಾದರೆ, ವಿಮರ್ಶೆ ತಾಕಲಾಟದ ಪ್ರತಿಫಲ ಅಷ್ಟೇ.


Thursday 6 June 2013

ಬನದ ಕರಡಿ:ಅವ್ವ



ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ ಯಾವುದು? ಎಂದು  ಯಾರಾದರೂ ನನ್ನನ್ನು ಕೇಳಿದರೆ ‘ಅವ್ವ’ ಎಂದೇ ಹೇಳುತ್ತೇನೆ.  ಅವ್ವನನು ಹುಗಿದು ಬಂದು ನಿರಮ್ಮಳವಾಗಿರುವುದು ಯಾರಿಗಾದರೂ ಸಾಧ್ಯವೇ?  ನಿಮಗೆ ಬೇಜಾರಾದರೂ ಚಿಂತೆಯಿಲ್ಲ, ನಾನು ಮತ್ತೆ ಮತ್ತೆ ಹೇಳುತ್ತೇನೆ-ತಾಯಿಗೂ ನಾಯಿಗೂ ಬಹಳ ಸಾಮ್ಯತೆಗಳಿವೆ. ಮುಪ್ಪಿನ ದಾರಿದ್ರ್ಯದಲ್ಲಿ ಅವ್ವನ ಪಾಡು, ನಾಯಿ ಪಾಡಾಗಿರುತ್ತದೆ. ತನ್ನ ಕಂದಮ್ಮಗಳ ರಕ್ಷಣೆಗೆ ಅವಳು ನಾಯಿಯಂತೆ ಕಾಲು ಕೆದರಿ ಜಗಳಕ್ಕೂ ಸಿದ್ಧಳಾಗುತ್ತಾಳೆ. ಮಕ್ಕಳ ಬೆಳೆಯುವಿಕೆಯ ಪ್ರಕ್ರಿಯೆ ಅವ್ವ ಕಳೆದುಕೊಳ್ಳುವ ವ್ಯಥೆಯ ಹಾಡಾಗುತ್ತದೆ. ನಾವು ಹೆಂಡಂದಿರ ತೋಳುಗಳ ಬಿಸುಪಿಗೆ ಹೋದಷ್ಟೂ ಅವ್ವ ಬರಿದಾಗುತ್ತಾಳೆ. ನಾವು ಗಹನವಾದಷ್ಟೂ ಅವಳು ವಾಚಾಳಿಯಗುತ್ತಾಳೆ. ಮುಪ್ಪು ಆಕೆಯ ಮೈ ಏರಿದಷ್ಟೂ ಅವಳು ಹತಾಶಳಾಗುತ್ತಾಳೆ, ಜಗಳಗಂಟಿಯಾಗುತ್ತಾಳೆ, ಮಣ್ಣುಮಯವಾಗಿ ಕಣ್ಣು ಮುಚ್ಚುವವರೆಗೂ ಅವಳು ಪ್ರೀತಿಗಾಗಿ ಹಪಹಪಿಸುತ್ತಾಳೆ. ನಮ್ಮ ಕವಿಗಳ ಸಾಲುಗಳಲ್ಲಿಯೇ ಅವಳನ್ನು ವ್ಯಾಖ್ಯಾನಿಸಬೇಕೆಂದರೇ, ಅವಳು ‘ಬನದ ಕರಡಿ’, ‘ಭುವನದ ಬಾಗ್ಯ’, ‘ಎದೆಯ ಬೂದಿ’, ‘ಛಲದ ಹಾದಿ’,‘ ನೆಲದ ಕೋಟಿ ಕೋಟಿ ಜೀವ ಜನ್ಮದ ಧಾರೆಯದಾರಿ’.