Translate

Saturday 15 June 2013

ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು:ಗಾಂಧಿ(Gandhi)

Mahatma Gandhi
“ಈ ಗಾಂಧಿ(Gandhi)ಯೊಂದಿಗೆ ಗುದ್ದಾಡುತ್ತಾ ನಾನೀಗ
 ಮಧ್ಯವಯಸ್ಸಿನ ಕದ ತಟ್ಟುತ್ತಿದ್ದೇನೆ. ಆದಾಗ್ಯೂ ಕಳೆದ 40 ವರ್ಷಗಳಿಂದ ಈತ ನನ್ನನ್ನು ಬೇಚೈನಾಗಿ ಉಳಿಸಿದ್ದಾನೆ ಎಂದರೆ ನೀವು ನಂಬಲಿಕ್ಕಿಲ್ಲ. ಅಲ್ಲಲ್ಲಿ ಮಿಣುಕು ದೀಪದಂತೆ, ಉರಿವ ದೀವಟಿಗೆಯಂತೆ, ಮುಗ್ಧವಾಗಿದ್ದ ನನ್ನಜ್ಜನಂತೆ, ಕೆಲವು ಸಲ ಬೇತಾಳದಂತೆ ಈ ಜೀವ ನನ್ನ ಜೀವನ ನಿರ್ಧಾರದ ಹಲವು ತಿರುವಿನ ಸಂದರ್ಭಗಳಲ್ಲಿಯೂ ಕುಣಿದಾಡಿ ಮಾಯವಾಗಿದೆ. ಗುಂಡಿನ ರಾತ್ರಿಗಳಲ್ಲಿ, ಆಲಿಂಗನದ ಆಟಗಳಲ್ಲಿ, ಸತ್ಯ-ಸುಳ್ಳುಗಳ ಬದುಕಿನ ಹಲವು ವಹಿವಾಟುಗಳಲ್ಲಿ, ಈತ ನನ್ನನ್ನು ಪೆಡಂಭೂತದಂತೆ ಬೆನ್ನಟ್ಟಿದ್ದಾನೆ. ಹಾಗೆಯೇ ನಿರ್ವೀಣ್ಯನಾಗಿ ಕುಸಿದು, ಕೊನೆಯುಸಿರಿನತ್ತ ಮನಸ್ಸು ಹೊರಳುವಾಗ ಜೋಹಾನ್ಸ್‍ಬರ್ಗ್‍ದ ಆ ರೈಲ್ವೆಸ್ಟೇಷನ್‍ನಿಂದ ನೇರವಾಗಿ ಎದುರು ಬಂದು ನಿಂತು `ಫಟಾರ್’ ಎಂದು ನನ್ನ ಮುಖಕ್ಕೆ ಹೊಡೆದಿದ್ದಾನೆ, ಎದೆಗೆ ಒದ್ದಿದ್ದಾನೆ. ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು ಎರಡೂ ಆಗಿರುವ ಮುಗ್ಧನಗೆಯ, ಸೋರೆಕಾಯಿಯಂಥ ತಲೆಯ, ಈ ಚಾಣಾಕ್ಷ ಮುದುಕ ನನ್ನ ಅತೀ ಪ್ರೀತಿಯ ವಸ್ತುಗಳಲ್ಲಿ ಒಂದಾಗಿದ್ದಾನೆ.”


Mahatma Gandhi
“ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ. ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಬಿಡಿಸಲಾಗದ ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ(Gandhi). ಹ್ಞಾಂ, ಅಂದ ಹಾಗೆ ಗಾಂಧಿ(Gandhi) ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‍ಗಳನ್ನಿಟ್ಟುಕೊಳ್ಳದೇ ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ(Gandhi). ಆದರೆ ಗಾಂಧಿವಾದವನ್ನೋದುವವರಿಗೆ ಗಾಂಧಿ(Gandhi) ಅರ್ಥವಾಗುವುದಿಲ್ಲ”


Mahatma Gandhi
“ಈ ಗಾಂಧಿ(Gandhi) ನಮಗೆ ಏನು ಹೇಳುತ್ತಾನೆ? ಎಂಬ ಒಂದು ಸಣ್ಣ ಕುತೂಹಲ ನನ್ನನ್ನು ಆತನ ಬೆನ್ನು ಬೀಳುವಂತೆ ಮಾಡಿತು.
ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧೀವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಫುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ(Gandhi) ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಟಿಯ ವೈಚಿತ್ರ್ಯ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೀಗೆ ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ(Gandhi) ನನ್ನ, ನಮ್ಮ ಹಾಗೂ ಪ್ರಪಂಚದ ಸಂವೇದನೆಗಳೊಳಗೆ.”


               ಹೆಚ್ಚಿನ ಓದಿಗಾಗಿ:- `ಗಾಂಧಿ: ಅಂತಿಮ ದಿನಗಳು’& 'ಗಾಂಧಿ:ಮುಗಿಯದ ಅಧ್ಯಾಯ' ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481