Translate

Wednesday, 16 October 2013

ನೀನು-ನಾನು



ನೀನು
ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ
ಹದ್ದಿನ ಬಾಯಿಂದ ಬಿದ್ದ
ಅರೆಜೀವದ ಮೀನು

ನಾನು
ಭೂ-ಬಸಿರ ಕೊಚ್ಚೆಯಲಿ ಹರಿದು
ಮತ್ತೆ ಮಡುಗಟ್ಟಿ, ಮಲೆತು
ಈಗ ಕೊಳವಾಗಿ ಉಳಿದುಕೊಂಡವನು

ಎಷ್ಟು ವಿಚಿತ್ರ !

ನೀರಿಗೇ ಬಿದ್ದರೂ
ನಿನಗೆ ಅಭಯವಿಲ್ಲ
ಮೀನಾಗಿ ಬಂದರೂ
ನನ್ನೊಳಗೆ ಸಂಸಾರವಿಲ್ಲ

ಇರುವಷ್ಟು ಕಾಲ
ಬಡಿದಾಡಬಹುದು
ಕೊಳಚೆ, ಕಣ್ಣೀರು ಬೆರೆಸಿ
ಹರಿದಾಡಬಹುದು
ಬರುವ ಸಾವನೇ
                               ಭಾಗ್ಯವೆಂದು ನೆಲವ ನಂಬಿ
                                ಪ್ರಾಣ ಕೊಟ್ಟು ಬಿಡಬಹುದು

ವ್ಯತ್ಯಾಸವಿಷ್ಟೇ
ನೀರೊಳಗೆ ಸತ್ತ ನೆಮ್ಮದಿ ನಿನಗೆ
ನೀರಾಗಿ ಜಲಚರವನೊಂದು ಕೊಂದ
ಹೆಗ್ಗಳಿಕೆ ನನಗೆ

ದಸರೆಯೊಳಗೆ ದಾಸಯ್ಯ

ದಸರೆಯೊಳಗೆ ದಾಸಯ್ಯ


ಈ ದಸರೆಯೊಳಗೆ ನಿಂತ ದಾಸಯ್ಯ ನಾನು
ಸವರಿ ಹೋಗುವವರನೆಲ್ಲ ಕೇಳುತ್ತೇನೆ ಸರಿದಾರಿ
ಬೆಟ್ಟಕ್ಕೆ, ನನ್ನೊಳಗೆ ಸತ್ತ ಜಗದ್ಗುರುವಿನ ಚಟ್ಟಕ್ಕೆ
ಮಣ್ಣು ಮಾರಿ ಮೇಲೆ ಕುಳಿತು
ರಮ್ಮಿ ಆಡುತ್ತಿರುವ ರಾಜಕಾರಣಿಗಳ ಅಟ್ಟಕ್ಕೆ
ಸಾಧ್ಯವಾದರೆ,
ನನ್ನ ಕವಿತೆ ಕೂಡುವ ಕವಿಶೈಲದ ಮಟ್ಟಕ್ಕೆ


ಆದರೆ
ಹುಳಿಯುಂಡ ಮನಸ್ಸು ಹಳೆಯ 
ಹಳವಂಡವನ್ನೇ ಹಾಡುತ್ತದೆ
ನೆನಪುಗಳ ನಾಯಿ ಕೂಗು
ನರ-ನರಗಳ ನುಡಿಸುತ್ತದೆ

ಈ ನನ್ನ ಮುಕ್ಕೋಟಿ ವರ್ಷಗಳ
ನನ್ನ ಮೈಗೆ ಮುತ್ತಿಟ್ಟ


ಈ ಮಾನಿನಿಯರಲ್ಲಿ ಮಾಯಿಯರೆಷ್ಟೋ
ತಾಯಿಯರೆಷ್ಟೋ, ತೆವಲಿನ ಹೆಂಗಸರೆಷ್ಟೋ

ಸೋಲು-ಗೆಲುವುಗಳ ಸೆಣಸಿದವರೆಷ್ಟೋ
ಸಂಸಾರ- ಸಾವು ಬಯಸಿದವರೆಷ್ಟೋ
ದಾರಿ ದೀಪದ ಹಾಗೆ ನಡೆಸಿದವರೆಷ್ಟೋ
ಹೆಜ್ಜೆ-ಹೆಜ್ಜೆಗೂ ಶಪಿಸಿ ಕೆಡಿಸಿದವರೆಷ್ಟೋ
ಲಜ್ಜೆ-ಲಾವಣ್ಯದ ಲಂಗ ಬಿಚ್ಚಿ ಬಾಳದೋಣಿಗೆ ಲಂಗರಾದವರೆಷ್ಟೋ
ಅಂಗ-ಅಂಗವೂ ಸವರಿ ಈ ಸಂಗ ಶಪಿಸಿದವರೆಷ್ಟೋ
ಸಂಗ ಸಿಗದಕ್ಕಾಗಿ ಸಾವ ಹಾರೈಸಿದವರೆಷ್ಟೋ
ಸುಡುಗಾಡು ಈ ಶಿವನ ತೊಡೆಯೇರಿದವರೆಷ್ಟೋ
ನನ್ನ ಸುಳ್ಳಿಗೆ ಸೋತು ಸುಖಿಸಿದವರೆಷ್ಟೋ
ಅದರೊಳಗೂ ಸತ್ಯದ ದೀಪ ಸುತ್ತಿ ಸತ್ತ ಚಿಟ್ಟೆಗಳೆಷ್ಟೋ
ಕರುಣಾಳು ಕೈ ನೀಡಿ ನಡೆಸಿದವರೆಷ್ಟೋ
ಶಿರಬಾಗಿ ತೇರೆಳೆದು ದೂರ ಉಳಿದವರೆಷ್ಟೋ


ಎಷ್ಟೊಂದು ಕಷ್ಟವೀ
ಮೈ-ಮುತ್ತಿನ ಲೆಕ್ಕ
ಮುಳುಗಿದಷ್ಟೂ ದ್ವಂದ್ವ
ಹಾಗೆಯೇ ಉಳಿಯುತ್ತದೆ
ಬಗೆಹರಿಯದೆ ಚೊಕ್ಕ

ಈಗ
ಈ ಹುಚ್ಚು ಲೆಕ್ಕವೇ ಬೇಡ
ಮುಳುಗಿದ್ದಕ್ಕೆ ಮಾತೂ ಬೇಡ
ಮುತ್ತಿನಿಂದ ಮಾಗಿದ ಮೈಗೆ
ಮೊಲೆ ಸವರಿ ಹೂವಾದ ಕೈಗೆ
ಲೆಕ್ಕವಿಡಲು ಒಕ್ಕಣಿಕೆ ಬೇಡ

ಬಂದವರು, ಬರಬೇಕಾದವರು
ಬಾರದೆಯೂ ಬೆಸೆದವರು ಎಲ್ಲ ಮುತ್ತಿಟ್ಟಿದ್ದಾರೆ
ಮುಕ್ಕೋಟಿ ವರ್ಷಗಳ ದೇಹಕ್ಕೆ
ಪ್ರೀತಿ ತೊಟ್ಟಿಲ ಕಟ್ಟಿ ಬಾಳು ಹರಸಿದ್ದಾರೆ
 ನಿರ್ಗಮನದ ನನ್ನ ಯಾತ್ರೆಗೆ
ಹೆಗಲ ಹುಟ್ಟಿಸಿದ್ದಾರೆ
ನನ್ನ ಪ್ರೀತಿಯ ಮೈಗೆ
ಮುತ್ತಿನ ಗೋರಿ ಕಟ್ಟಿಸಿದ್ದಾರೆ
                    ಹೀಗೆ, ಹೀಗೆ ನೆನಪುಗಳೊಳಗೆ
ಹಗಳುಗಳು ಹಡಬಡಿಸಿ ಒಡುತ್ತವೆ
ದಸರೆಗೆ ಬಂದವರು ದರ್ಬಾರು ಮುಗಿಸಿ
ಪೇರಿ-ಡೇರಿಗಳ ಭಿತ್ತಿಚಿತ್ರ ಕೀಳಿಸಿ
ಊರ ಸೇರುತ್ತಾರೆ
ದಾಸಯ್ಯ ನಾನು,
ಮರು ದಸರೆಗೆ ಮತ್ತೆ ಕಾಯುತ್ತೇನೆ
ಮತ್ತೆ ಕಾಯುತ್ತೇನೆ