Translate

Friday, 7 June 2013

`ತಲ್ಲಣ' ಎಂದರೆ ಸಾದತ್ ಹಸನ್ ಮಾಂಟೊ(sadat hassan manto)

           `ತಲ್ಲಣ' ಎಂದ ತಕ್ಷಣ ನನಗೆ ತಟ್ಟನೆ ನೆನಪಾಗುವುದು ಸಾದತ್ ಹಸನ್ ಮಾಂಟೊ((sadat hassan manto).
Sadat Hassan Manto
ಕೇವಲ 42 ವರ್ಷ ಬದುಕಿದ್ದ ಬೆಂಕಿಯ ಕುಡಿಯಂಥ ಈ ಬರಹಗಾರ ಭಾರತದ ಮಧ್ಯಯುಗಿನ ಉತ್ತರಾರ್ಧ ಇತಿಹಾಸದ ತಲ್ಲಣಗಳಿಗೆ ಸಾಕ್ಷಿಯಾದವನು. ಮಾನವೀಯತೆಯ ಒಡೆಯಲಾಗದ ಪ್ರತಿಮೆಯನ್ನು ಪ್ರೀತಿಸಿದ್ದ ಈತ ಸಮಾಜ ದೂಷಿತ ಸ್ವೇಚ್ಛಾಚಾರಿಯಾಗಿದ್ದರಿಂದ `ಪಾಪಿ' ಎನಿಸಿಕೊಂಡಿದ್ದ. ಒಂದಿಷ್ಟು ಕಾಲ ಲಾಹೋರ್, ಮತ್ತಷ್ಟು ಕಾಲ ಬೊಂಬೆ, ಹೀಗೆ ಲೋಲಕದಂತೆ  ಒಡಾಡಿಕೊಂಡಿದ್ದ ಸಾದತ್ ಹಸನ್ ಮಾಂಟೊ ಆತನ ಕಾಲದ ಅಸಮಾಧಾನ, ವಿಷಾದ,ತಲ್ಲಣಗಳೇ ಮಡುಗಟ್ಟಿದ ಮಡುವಾಗಿದ್ದ. ಅದೇಕೊ ಗೊತ್ತಿಲ್ಲ, ಇಂಥ ಇನ್ನೊಬ್ಬ ಲೇಖಕ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಚರ್ಚೆಗೆ ಅರ್ಹನಿದ್ದಾನೆ ಎಂದು ನನಗೆ ಇದುವರೆಗೂ ಅನ್ನಿಸಿಲ್ಲ. ಹೀಗಾಗಿಯೇ ನನ್ನ ಪಾಲಿಗೆ `ತಲ್ಲಣ' ಎಂದರೆ ಮಾಂಟೊ. ಬೋದಿಲೇರನಿಗೆ ಬರೆದ ಮುನ್ನುಡಿಯಲ್ಲಿ ನನ್ನ ಈ ವಾದವನ್ನು ಸಮರ್ಥಿಸುವ ಲಂಕೇಶರ ಒಂದಿಷ್ಟು ಮಾತುಗಳಿವೆ. "ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಕಾವ್ಯಕ್ಕೆ ಕತ್ತು ಕೊಟ್ಟವರು ನಮ್ಮಲ್ಲಿ ಬಹಳ ಕಡಿಮೆ. ಪಶ್ಚಿಮದಲ್ಲಿ ಇಂಥವರ ಪಂಥವೇ ಇದೆ" ಎಂದಿದ್ದಾರೆ ಲಂಕೇಶ್(Lankesh). ಹೌದು, ಇದನ್ನು ನೀವೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದ ಇತಿಹಾಸದ ಅಗಣಿತ ವಿಪ್ಲವಗಳಿಗೆ ಮನಸ್ಸೊಡ್ಡಿದ ಬಂಗಾಲ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಬಿಹಾರ, ಕಾಶ್ಮಿರ ಹಾಗೂ ಪಂಜಾಬಗಳನ್ನು ಹೊರತುಪಡಿಸಿದರೆ ದಕ್ಷಿಣದ ಬಹುಪಾಲು ಬರಹಗಾರರು ಸಾವಿನ ಲೇಪನವಿಲ್ಲದೆ ಬರೆದವರು. ವ್ಯಕ್ತಿ ನೆಲೆಯಲ್ಲಿ ಮತ್ತು ಸಮಷ್ಟಿಯ ನೆಲೆಯಲ್ಲಿಯೂ ಸಂತೃಪ್ತಿಯ ಜಾಡನ್ನು ಹಿಡಿದುಕೊಂಡು ಹೋಗುವ ದಕ್ಷಿಣದ ಬರಹಗಾರ, ತಾಕಲಾಟದ ಸಂದರ್ಭಗೊಳಗಾಗಿದ್ದು ಕಡಿಮೆ ಎಂದುಕೊಂಡಿದ್ದೇನೆ ನಾನು. ಹಾಗೆ ನೋಡಿದರೆ ನಮ್ಮದನ್ನು ಬರಹಗಾರನ `ತಾಕಲಾಟ'ಗಳು ಎಂದುಕೊಳ್ಳುವುದು ಹೆಚ್ಚು ಉಚಿತ. ಇಲ್ಲಿ ತಲ್ಲಣಗಳ ಪ್ರಶ್ನೆ ಕಡಿಮೆ.
         ನಾನು `ತಾಕಲಾಟದ' ಅರ್ಥವನ್ನು ಮಾನಸಿಕ ಘರ್ಷಣೆ ಎಂದು ಗ್ರಹಿಸಿದ್ದೇನೆ. ಆದರೆ `ತಲ್ಲಣ'ದ ಅರ್ಥವ್ಯಾಪ್ತಿ ಬಹಳಷ್ಟು ಸಂಕೀರ್ಣ, ವಿಸ್ತ್ರತ ಹಾಗೂ ವಿಚಿತ್ರ. `ತಲ್ಲಣ' ಒಂದು ರೀತಿಯಲ್ಲಿ ಮನೋವ್ಯಥೆ, ತಾಪ, ಸಂಕಟ, ಕಕ್ಕಾಬಿಕ್ಕಿ, ಹೀಗೆ ಏನೇನೋ. ತಲ್ಲಣಕ್ಕೆ ಸಾಕ್ಷಿ `ಹೆರುವ ಹೊಳೆಯೊಳಗಿಳಿದ ಹೆಣ್ಣು' ಆಗಬಹುದೇನೋ. ತಾಕಲಾಟಕ್ಕೆ ಯಾವ ವ್ಯಾಪಾರಿ ಬುದ್ಧಿಯೂ ಸರಿಹೋದೀತು. ಕಾವ್ಯ ತಲ್ಲಣದ ಕೂಸಾದರೆ, ವಿಮರ್ಶೆ ತಾಕಲಾಟದ ಪ್ರತಿಫಲ ಅಷ್ಟೇ.