Translate

Sunday 4 May 2014

ಮೀನಾಕುಮಾರಿ, ಗುಲ್ಜಾರ್ ಮತ್ತು ಫಾಲ್ಕೆ…(meenakumari, Gulzar and Phalke)

ಕಾಳಸಂತೆಯಲ್ಲಿಯೂ ಕಾವ್ಯ ಕಾಯ್ದಿರಿಸಿಕೊಂಡವರು ಗುಲ್ಜಾರ್ , ಚೂರು - ಪಾರು , ಅಲ್ಲಿ - ಇಲ್ಲಿ ಅವರ ಕವಿತೆಗಳನ್ನು ಓದಿದ್ದು ಬಿಟ್ಟರೆ ನಾನು ಅವರನ್ನು ಸಮಗ್ರವಾಗಿ ಕುಡಿದವನಲ್ಲ . ಕುಡಿತ ಕೆಲವೊಮ್ಮೆ ಸಂಪೂರ್ಣವಾಗಬೇಕಾದುದು ಇಲ್ಲ . ಖಾಲಿ ಗ್ಲಾಸಿನಲ್ಲಿಯ ಮಧ್ ಹೋಶಿ ಮರುಳಾಗದವನು ಕುಡಿದೂ ಭಾವ ಪರವಶತೆಗೆ ಏರಲಾರ . ಕುಡಿತದಲ್ಲಿ ಖಾಲಿತನಕ್ಕೆ ಎಷ್ಟು ಅರ್ಥವಿದೆಯೋ ಕಾವ್ಯದಲ್ಲಿ ನಿಶ್ಯಬ್ದಿಗೆ ಅಷ್ಟೇ ಘನತೆಯಿದೆ . ಅದು ಶಬ್ದದೊಳಗೆ ಕಾಣುವ ಸತ್ಯ . ಆಯಾಮವನ್ನು ತಮ್ಮ ಕಾವ್ಯದಲ್ಲಿ , ಬದುಕಿನಲ್ಲಿ ಸಾಧಿಸಿದವರು ಗುಲ್ಜಾರ್ . ಅವರ ಕಾವ್ಯಕ್ಕಿಗ ಫಾಲ್ಕೆ ದಕ್ಕಿದೆ . ಆದರೆ ಪ್ರಶಸ್ತಿ , ಪಾ ತೋಷಕಗಳ ಗಡಿಯನ್ನು ಉಲ್ಲಂಘಿಸುತ್ತ ಹೊರಡುವ ಗುಲ್ಜಾರ್ ಮತ್ತು ಅವರ ಕಾವ್ಯದ ಮೇಲೆ ಎಲ್ಲರ ಹಕ್ಕು ಇದೆ
ಅವರ `ಮೀನಾಕುಮಾರಿ ಕಿ ಶಿಕವಾಯೆಂ' ಸಂಗ್ರಹದ  ಕೆಲವು ಶಾಯರಿಗಳ ಭಾವಾನುವಾದ ಇಲ್ಲಿದೆ. 



ಹುಚ್ಚು ಪ್ರೇಯಸಿ ನಾನು
ರಾತ್ರಿ ಕಳೆಯುತ್ತೇನೆ
ದುಃಖವೇ ನನ್ನ ವೈರಿ
ದುಃಖವೇ ಹಂಬಲ ಈ ಹೃದಯಕೆ            
ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ



ನಾ ಹೇಗೆ ಬದುಕುವೆ?
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ,
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ
ಓ ದೇವರೇ,
ಬದುಕುವುದೆಂದರೆ ಉಸಿರಾಟವೇ, ಅಲ್ಲ
ಈಗ ಹೃದಯಕ್ಕೆ
ನೋವಿನ ಭಾಧೆಯಿಲ್ಲ
ಕಣ್ಣಾಲೆಗಳಲ್ಲಿ ಮತ್ತಷ್ಟು
ಕಣ್ಣೀರಿಗೆ ಸ್ಥಳವಿಲ್ಲ
ಭಗ್ನ ಕನಸುಗಳು ಮಾತ್ರ
ನಿದ್ರಾಹೀನ ರಾತ್ರಿಗಳ
ಇರಿಯುತ್ತಲೇ ಇರುತ್ತವೆ
ಮುಳ್ಳುಗಳಂತೆ