Translate

Saturday, 15 March 2014

ಜಡಿ ಮಳೆಯೆಂದರೆ ಧಾರವಾಡ..........


                                           ಗುಡ್ಡ ಗುಡ್ಡ ಸ್ಥಾವರಲಿಂಗ ಮಾಡಿಧಾಂಗ ಅಭ್ಯಂಗ  
                                                                                                                     -ದ. ರಾ. ಬೇಂದ್ರೆ

    



                         ಬದುಕಿನ ಒಂದೇ ಒಂದು ಕ್ಷಣ ಈ ನೆಲವನ್ನು ಬಳಸಿಕೊಂಡು ಹೋದವರಾರು ಹಾಡಿಕೊಳ್ಳದೇ ಉಳಿದಿಲ್ಲ, ಅಕ್ಷರ ಬಲ್ಲವರು ಬರಹಗಾರರಾಗದೇ ಉಳಿದಿಲ್ಲ, ಎಂಥ ಮಾಯಾನಗರಿ ಈ ಧಾರವಾಡ! ಎಷ್ಟೊಂದು ಸಮೃದ್ಧ ಇಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಿಸರ. ಇದರ ಭಾವ ಶ್ರೀಮಂತಿಕೆಯನ್ನು ತಿಳಿಯಬೇಕದರೆ ನೀವು ಎಚ್.ಕೆ.ರಂಗನಾಥರ `ನೆನಪಿನ ನಂದನ’ ಆತ್ಮಕಥನವನ್ನು ಓದಬೇಕು. ಅವರು ಬರೆಯುತ್ತಾರೆ, “ ಅಂದು ನಾನು ಕಂಡ ಧಾರವಾಡವನ್ನು ಇಂದು ನೆನಪಿಸಿಕೊಂಡರೆ ನಿಜವಾಗಿಯು ಅದು ಭೂ ಸ್ವರ್ಗ. ಅಲ್ಲಿನ ಸಮೃದ್ಧವಾದ ಹಸಿರು, ಹೂವು, ಹಣ್ಣು-ಹಂಪಲು, ಈವರೆಗೆ ನಾನು ಅದಕೆ ಸರಿಸಾಟಿ ಕಂಡಿರಲಿಲ್ಲ. ಊರು ಸಣ್ಣದು, ಸಪ್ತಾಪುರ, ಎಮ್ಮೆಕೆರೆ, ಕೆಲಗೇರಿ, ಹಾಲಗೇರಿ ಮೊದಲಾದ ಅನ್ವರ್ಥಕ ಬಡಾವಣೆಗಳು. ಸಾಹಿತ್ಯ, ಕಾವ್ಯ, ನಾಟಕಗಳ ಹೆಪ್ಪು ನೆಲವೆಂದರೆ ಸಾಧನಕೇರಿ. ಆಲೂರು ವೆಂಕಟರಾಯರು, ಬೇಂದ್ರೆಯವರು, ಶಂಬಾರವರು, ಶ್ರೀರಂಗರು, ಕವಲಿಯವರು, ಹುಯಿಲಗೋಳ, ಇನಾಂದಾರ್, ಇವರ ಮನೆಗಳು ಇದ್ದದ್ದು ಅಲ್ಲಿಯೇ. ಕೆಲ ಮನೆಗಳಲ್ಲಿ ವಿದ್ಯುತ್ ದೀಪ ಕಂಡರೂ ರಸ್ತೆಗೆ ಬಂದಿರಲಿಲ್ಲ. ತಿಂಗಳ ಬೆಳಕು ಎಂದರೆ ಹಾಲಿನ ಹೊಳೆ. ಹುಣ್ಣಿಮೆಯ ರಾತ್ರಿ ಪುಸ್ತಕ ಹಿಡಿದು ಓದಬಹುದು. ಹಾಗೆಯೇ ಕೃಷ್ಣ ಪಕ್ಷದ ರಾತ್ರಿಯ ಕತ್ತಲು, ಹೆಪ್ಯ್ಪಗಟ್ಟಿದ ಕಗ್ಗತ್ತಲು, ಕಣ್ಣು ಮುಂದೆ ಕೈ ಹಿಡಿದರೂ ಬೆಳಕು ಕಾಣುವಂತಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ಎಲ್ಲೆಲ್ಲೂ ಗಿಡ-ಮರಗಳು, ಇಡಿ ರಾತ್ರಿ ಕೀಟ ಮೇಳದ ನಿಶಾಗಾನ, ಮಳೆಗಾಲದಲ್ಲಿನ ಸೋನೆ ಮಳೆ ದಿನ ದಿನಗಳವೆರೆಗೆ ಬಿಡುವುದಿಲ್ಲ. ಧಾರವಾಡದ ಜಡಿ ಮಳೆಯೆಂದರೆ ತಲೆಯನ್ನು ಹೊರಗೆ ಹಾಕುವಂತಿಲ್ಲ. ಅಲ್ಲಿನ ಮಿಂಚು- ಗುಡುಗು-ಸಿಡಿಲು ಎಂದರೆ `ಶ್ರಾವಣ ಬಂತು ಶ್ರಾವಣ’ ಎಂಬ ಕವಿತೆಯಲ್ಲಿ ಬೇಂದ್ರೆಯವರು ನುಡಿದಂತೆ ವಿರಾಟ ವೈಭವ.
    

                                   ಇಂಥ ನಮ್ಮ ಧಾರವಾಡ ಅದೆಷ್ಟು ಯುಗಾದಿಗಳನ್ನು ಕಂಡಿದೆಯೋ, ಅದೆಷ್ಟು ಹಾಡು-ಹಬ್ಬದ ಸಂಭ್ರಮವನ್ನಾಚರಿಸಿಕೊಂಡಿದೆಯೋ ಇದು ಲೆಕ್ಕಕ್ಕೆ ಸಿಗದ ಲೆಕ್ಕ. ಆದರೆ ಪ್ರತಿ ಯುಗಾದಿಯ ಆದಿಯಲ್ಲೊಮ್ಮೆ ಈ ಬದುಕಿನ ಲೆಕ್ಕಾಚಾರ, ಆತ್ಮಾವಲೋಕನ ನಡೆದಿರಲಿಕ್ಕೆ ಸಾಕು, ಈ ಸಮ್ರುದ್ಧ ನೆಲಕ್ಕೊಮ್ಮೆ ದೂರ ದೂರದಿಂದ ಹಕ್ಕಿಗಳು ಬಂದು ಸೇರುವಂತೆ ಅದೆಷ್ಟೋ ಸೃಜನ ಶೀಲರು ಬಂದಿದ್ದಾರೆ. ಮರಳಿ ಹೋಗಿದ್ದಾರೆ. ಆದಾಗ್ಯೂ ಇದ್ಯಾವುದರಿಂದಲೂ ಅಭಾದಿತವಾಗದೇ ಇಲ್ಲಿ ನಿತ್ಯ ಹೂ ಅರಳುತ್ತಲೇ ಇವೆ. ನಿಸ್ಸಂಶಯವಾಗಿಯೂ ಅಂದಿನ ಧಾರವಾಡ ಇಂದಿಲ್ಲ, ಇಂದಿರುವುದು ನಾಳೆಯು ಇರಲಿಕ್ಕಿಲ್ಲವೇನೊ. ಪ್ರತಿ ಜನಾಂಗಕ್ಕೆ, ತಲೆಮಾರಿಗೆ ಹೊಸ ಸೊಬಗು, ಕನಸು, ಭರವಸೆಗಳಿರುವಂತೆ ನಮ್ಮ ಧಾರವಾಡಕ್ಕೂ. ಅಂತೆಯೇ ಈ ಮಾಯಾನಗರಿಯನ್ನು ಕುರಿತು ನಾನು ಹಾಡಿಕೊಂಡಿದ್ದೇನೆ-
 

“ನನ್ನೂರ ಧಾರವಾಡ
ನನ್ಹಿಂಗ ಕಾಡಬ್ಯಾಡ
ಎದೆಯಾಗ ನೂರು ತರದ
ತುಡಬುಡಕಿಯಾಡಬೇಡ”

No comments:

Post a Comment