ನೀನು
ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ
ಹದ್ದಿನ ಬಾಯಿಂದ ಬಿದ್ದ
ಅರೆಜೀವದ ಮೀನು
ನಾನು
ಭೂ-ಬಸಿರ ಕೊಚ್ಚೆಯಲಿ ಹರಿದು
ಮತ್ತೆ ಮಡುಗಟ್ಟಿ, ಮಲೆತು
ಈಗ ಕೊಳವಾಗಿ ಉಳಿದುಕೊಂಡವನು
ಎಷ್ಟು ವಿಚಿತ್ರ !
ನೀರಿಗೇ ಬಿದ್ದರೂ
ನಿನಗೆ ಅಭಯವಿಲ್ಲ
ಮೀನಾಗಿ ಬಂದರೂ
ನನ್ನೊಳಗೆ ಸಂಸಾರವಿಲ್ಲ
ಇರುವಷ್ಟು ಕಾಲ
ಬಡಿದಾಡಬಹುದು
ಕೊಳಚೆ, ಕಣ್ಣೀರು ಬೆರೆಸಿ
ಹರಿದಾಡಬಹುದು
ಬರುವ ಸಾವನೇ
ಭಾಗ್ಯವೆಂದು ನೆಲವ ನಂಬಿ
ಪ್ರಾಣ ಕೊಟ್ಟು ಬಿಡಬಹುದು
ವ್ಯತ್ಯಾಸವಿಷ್ಟೇ
ನೀರೊಳಗೆ ಸತ್ತ ನೆಮ್ಮದಿ ನಿನಗೆ
ನೀರಾಗಿ ಜಲಚರವನೊಂದು ಕೊಂದ
ಹೆಗ್ಗಳಿಕೆ ನನಗೆ
No comments:
Post a Comment