Translate

Sunday, 15 December 2013

ಕಟ್ಟಡ ಉದ್ಘಾಟನೆ, ಸಾಹಿತ್ಯ, ಅಭಿನಂದನಾ ಸಮಾರಂಭ...........

ಕಟ್ಟಡ ಉದ್ಘಾಟನೆಯ ಸಮಾರಂಭವೊಂದನ್ನು ಹೀಗೂ ಮಾಡಬಹುದೇ? ಅದು ಬರೀ ತಿಂದುಂಡು  ಮನೆಗೆ ಹೋಗಿ ಮರೆತು ಬಿಡುವ ಸಮಾರಂಭವಾಗದೆ, ಆ ಸ್ಥಳಕ್ಕೆ, ಅಲ್ಲಿನ ಜನತೆಗೊಂದು ಸಂದೇಶ ನೀಡುವ ಹಾಗೂ ಅದಕ್ಕೊಂದು ಐತಿಹಸಿಕ ಘನೆತೆ ತರುವ ಸಮಾರಂಭವಾಗಲಾರದೇ? ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ-



Wednesday, 16 October 2013

ನೀನು-ನಾನು



ನೀನು
ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ
ಹದ್ದಿನ ಬಾಯಿಂದ ಬಿದ್ದ
ಅರೆಜೀವದ ಮೀನು

ನಾನು
ಭೂ-ಬಸಿರ ಕೊಚ್ಚೆಯಲಿ ಹರಿದು
ಮತ್ತೆ ಮಡುಗಟ್ಟಿ, ಮಲೆತು
ಈಗ ಕೊಳವಾಗಿ ಉಳಿದುಕೊಂಡವನು

ಎಷ್ಟು ವಿಚಿತ್ರ !

ನೀರಿಗೇ ಬಿದ್ದರೂ
ನಿನಗೆ ಅಭಯವಿಲ್ಲ
ಮೀನಾಗಿ ಬಂದರೂ
ನನ್ನೊಳಗೆ ಸಂಸಾರವಿಲ್ಲ

ಇರುವಷ್ಟು ಕಾಲ
ಬಡಿದಾಡಬಹುದು
ಕೊಳಚೆ, ಕಣ್ಣೀರು ಬೆರೆಸಿ
ಹರಿದಾಡಬಹುದು
ಬರುವ ಸಾವನೇ
                               ಭಾಗ್ಯವೆಂದು ನೆಲವ ನಂಬಿ
                                ಪ್ರಾಣ ಕೊಟ್ಟು ಬಿಡಬಹುದು

ವ್ಯತ್ಯಾಸವಿಷ್ಟೇ
ನೀರೊಳಗೆ ಸತ್ತ ನೆಮ್ಮದಿ ನಿನಗೆ
ನೀರಾಗಿ ಜಲಚರವನೊಂದು ಕೊಂದ
ಹೆಗ್ಗಳಿಕೆ ನನಗೆ

ದಸರೆಯೊಳಗೆ ದಾಸಯ್ಯ

ದಸರೆಯೊಳಗೆ ದಾಸಯ್ಯ


ಈ ದಸರೆಯೊಳಗೆ ನಿಂತ ದಾಸಯ್ಯ ನಾನು
ಸವರಿ ಹೋಗುವವರನೆಲ್ಲ ಕೇಳುತ್ತೇನೆ ಸರಿದಾರಿ
ಬೆಟ್ಟಕ್ಕೆ, ನನ್ನೊಳಗೆ ಸತ್ತ ಜಗದ್ಗುರುವಿನ ಚಟ್ಟಕ್ಕೆ
ಮಣ್ಣು ಮಾರಿ ಮೇಲೆ ಕುಳಿತು
ರಮ್ಮಿ ಆಡುತ್ತಿರುವ ರಾಜಕಾರಣಿಗಳ ಅಟ್ಟಕ್ಕೆ
ಸಾಧ್ಯವಾದರೆ,
ನನ್ನ ಕವಿತೆ ಕೂಡುವ ಕವಿಶೈಲದ ಮಟ್ಟಕ್ಕೆ


ಆದರೆ
ಹುಳಿಯುಂಡ ಮನಸ್ಸು ಹಳೆಯ 
ಹಳವಂಡವನ್ನೇ ಹಾಡುತ್ತದೆ
ನೆನಪುಗಳ ನಾಯಿ ಕೂಗು
ನರ-ನರಗಳ ನುಡಿಸುತ್ತದೆ

ಈ ನನ್ನ ಮುಕ್ಕೋಟಿ ವರ್ಷಗಳ
ನನ್ನ ಮೈಗೆ ಮುತ್ತಿಟ್ಟ


ಈ ಮಾನಿನಿಯರಲ್ಲಿ ಮಾಯಿಯರೆಷ್ಟೋ
ತಾಯಿಯರೆಷ್ಟೋ, ತೆವಲಿನ ಹೆಂಗಸರೆಷ್ಟೋ

ಸೋಲು-ಗೆಲುವುಗಳ ಸೆಣಸಿದವರೆಷ್ಟೋ
ಸಂಸಾರ- ಸಾವು ಬಯಸಿದವರೆಷ್ಟೋ
ದಾರಿ ದೀಪದ ಹಾಗೆ ನಡೆಸಿದವರೆಷ್ಟೋ
ಹೆಜ್ಜೆ-ಹೆಜ್ಜೆಗೂ ಶಪಿಸಿ ಕೆಡಿಸಿದವರೆಷ್ಟೋ
ಲಜ್ಜೆ-ಲಾವಣ್ಯದ ಲಂಗ ಬಿಚ್ಚಿ ಬಾಳದೋಣಿಗೆ ಲಂಗರಾದವರೆಷ್ಟೋ
ಅಂಗ-ಅಂಗವೂ ಸವರಿ ಈ ಸಂಗ ಶಪಿಸಿದವರೆಷ್ಟೋ
ಸಂಗ ಸಿಗದಕ್ಕಾಗಿ ಸಾವ ಹಾರೈಸಿದವರೆಷ್ಟೋ
ಸುಡುಗಾಡು ಈ ಶಿವನ ತೊಡೆಯೇರಿದವರೆಷ್ಟೋ
ನನ್ನ ಸುಳ್ಳಿಗೆ ಸೋತು ಸುಖಿಸಿದವರೆಷ್ಟೋ
ಅದರೊಳಗೂ ಸತ್ಯದ ದೀಪ ಸುತ್ತಿ ಸತ್ತ ಚಿಟ್ಟೆಗಳೆಷ್ಟೋ
ಕರುಣಾಳು ಕೈ ನೀಡಿ ನಡೆಸಿದವರೆಷ್ಟೋ
ಶಿರಬಾಗಿ ತೇರೆಳೆದು ದೂರ ಉಳಿದವರೆಷ್ಟೋ


ಎಷ್ಟೊಂದು ಕಷ್ಟವೀ
ಮೈ-ಮುತ್ತಿನ ಲೆಕ್ಕ
ಮುಳುಗಿದಷ್ಟೂ ದ್ವಂದ್ವ
ಹಾಗೆಯೇ ಉಳಿಯುತ್ತದೆ
ಬಗೆಹರಿಯದೆ ಚೊಕ್ಕ

ಈಗ
ಈ ಹುಚ್ಚು ಲೆಕ್ಕವೇ ಬೇಡ
ಮುಳುಗಿದ್ದಕ್ಕೆ ಮಾತೂ ಬೇಡ
ಮುತ್ತಿನಿಂದ ಮಾಗಿದ ಮೈಗೆ
ಮೊಲೆ ಸವರಿ ಹೂವಾದ ಕೈಗೆ
ಲೆಕ್ಕವಿಡಲು ಒಕ್ಕಣಿಕೆ ಬೇಡ

ಬಂದವರು, ಬರಬೇಕಾದವರು
ಬಾರದೆಯೂ ಬೆಸೆದವರು ಎಲ್ಲ ಮುತ್ತಿಟ್ಟಿದ್ದಾರೆ
ಮುಕ್ಕೋಟಿ ವರ್ಷಗಳ ದೇಹಕ್ಕೆ
ಪ್ರೀತಿ ತೊಟ್ಟಿಲ ಕಟ್ಟಿ ಬಾಳು ಹರಸಿದ್ದಾರೆ
 ನಿರ್ಗಮನದ ನನ್ನ ಯಾತ್ರೆಗೆ
ಹೆಗಲ ಹುಟ್ಟಿಸಿದ್ದಾರೆ
ನನ್ನ ಪ್ರೀತಿಯ ಮೈಗೆ
ಮುತ್ತಿನ ಗೋರಿ ಕಟ್ಟಿಸಿದ್ದಾರೆ
                    ಹೀಗೆ, ಹೀಗೆ ನೆನಪುಗಳೊಳಗೆ
ಹಗಳುಗಳು ಹಡಬಡಿಸಿ ಒಡುತ್ತವೆ
ದಸರೆಗೆ ಬಂದವರು ದರ್ಬಾರು ಮುಗಿಸಿ
ಪೇರಿ-ಡೇರಿಗಳ ಭಿತ್ತಿಚಿತ್ರ ಕೀಳಿಸಿ
ಊರ ಸೇರುತ್ತಾರೆ
ದಾಸಯ್ಯ ನಾನು,
ಮರು ದಸರೆಗೆ ಮತ್ತೆ ಕಾಯುತ್ತೇನೆ
ಮತ್ತೆ ಕಾಯುತ್ತೇನೆ

Sunday, 13 October 2013

12/10/13 ರಂದು  ದಸರಾ ಕವಿಗೋಷ್ಠಿಗೆ ಅಹ್ವಾನಿತನಾಗಿ ಹೋಗಿದ್ದೆ. ನಾನು ವಾಚಿಸಿದ ` ದಸರೆಯಲ್ಲಿ ದಾಸಯ್ಯ’ ಕವಿತೆಯ ವಿಡಿಯೋ ತುಣುಕು ನಿಮಗಾಗಿ... https://plus.google.com/114621774015207597475/posts/7i7fq8vXvcF

Monday, 30 September 2013

ಮಹಾತ್ಮ ಗಾಂಧಿ: ಬರೀ ಅಕ್ಟೋಬರ್ (October)2 ರ ನೆನಪೇ?...


                                                        
                                             
   
Mahatma Gandi

ಗಾಂಧಿ ಬರೀ ಒಂದು ದೇಹವಲ್ಲ ಎಂದು ನೀವು ಒಪ್ಪುವುದಾದರೆ ಈತನ ಪ್ರವಾಸ ಸಾವಿರಾರು ವರ್ಷಗಳ ಹಿಂದೆಯೆ ಶುರುವಾಗಿದೆ. ಇದು ಆತ್ಮವನ್ನು, ಅದರ ಅವಿನಾಶಿ ಜಂಗಮತ್ವವನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಅನ್ವಯವಾಗುವ ಮಾತೂ ಕೂಡ. ಲೆಕ್ಕಚಾರಗಳೆಲ್ಲ ಏನೇ ಇರಲಿ, ನಮಗೆ ಬೇಕಾಗಿಯೂ ಬೇಡಾಗಿಯೂ ನಮ್ಮ ಇತಿಹಾಸ, ವರ್ತಮಾನದ ಉದ್ಧರಣೆಯಾಗಿದ್ದಾನೆ ಗಾಂಧಿ. ಭವಿಷ್ಯದಿಂದಲೂ ಆತನನ್ನು ನಾವು ಧಿಕ್ಕರಿಸುವಂತಿಲ್ಲ. ರಜೆಯಾಗಿ, ಅಕ್ಟೋಬರ್ 2(October 2) ರ ಮೋಜಾಗಿ ಬಂದೇ ಬರುತ್ತಾನೆ ಗಾಂಧಿ. ಚೌಕು, ವೃತ್ತಗಳಲ್ಲಿ, ಕಾಲೇಜು, ಬಂದೀಖಾನೆಗಳಲ್ಲಿ, ಫೊಟೋ ಪುತ್ಥಳಿಯಾಗಿ, ಕಣ್ಣಿರಿಯುತ್ತಾನೆ ಗಾಂಧಿ. ಗುಂಡು-ಗೋಷ್ಠಿಗಳಲ್ಲಿ, ಸುಳ್ಳಿನ ಸಂತೆಯಲ್ಲಿ, ಕಾಳ ಸಂತೆಯಲಿ ಪುತ್ಥಳಿಯಾಗಿ ಮಾರಾಟವಾಗುತ್ತಾನೆ ಗಾಂಧಿ. ಉಪವಾಸದ ನಾಟಕಗಳಲ್ಲಿ, ಧರ್ಮಾರ್ಥ ಚಿಂತನೆಗಳಲ್ಲಿ ಸಾಕ್ಷಿಯಾಗುತ್ತಾನೆ ಗಾಂಧಿ. ಗಾಂಧಿಯಿಲ್ಲದ ಯಾವುದಾದರು ಸ್ಥಳ ಅಥವಾ ಆಲೋಚನೆಯನ್ನು ನಾವು ಕಲ್ಪಿಸಬಹುದೇ? ನನಗಿದು ಬಿಡಿಸಲಾಗದ ಪ್ರಶ್ನೆ. ಹೀಗೆಲ್ಲಾ ಗಾಂಧಿಯ ಬಗ್ಗೆ ವಿವೇಚಿಸುತ್ತಾ ಗಾಂಧಿಯನ್ನು ನಾವೆಲ್ಲಿಗೆ ಕರೆದೊಯ್ದೆವು? ನಮ್ಮ ಸಾಮಾಜಿಕತೆ ಮತ್ತು ರಾಜಕೀಯದ ಯಾವ ಅಳತೆಗೋಲಾಗಿ ಅವನನ್ನು ಇಟ್ಟುಕೊಂಡೆವು ನನಗೆ ತಿಳಿಯುತ್ತಿಲ್ಲ.
   
ನಾವು ಗಾಂಧಿಯನ್ನು, ಆತನ ವಿಚಾರಗಳನ್ನು ಅನುಸರಿಸಿದ್ದಕ್ಕಿಂತ ಆರಾಧಿಸಿದ್ದೇ ಹೆಚ್ಚು. ವ್ಯಕ್ತಿ ಆರಾಧನೆ, ಎಲ್ಲೋ ನಮ್ಮನ್ನು ಆತನಿಂದ, ಆತನನ್ನು ನಮ್ಮಿಂದ ದೂರ ಒಯ್ದು ನಿಲ್ಲಿಸಿಬಿಡುತ್ತದೆ. ಪ್ರಪಂಚದ ಎಲ್ಲ ಸಾಮಾಜಿಕ ಸುಧಾರಕರು ಕಾರಣಕ್ಕಾಗಿ ಅಲ್ಲವೇ ದೇವರಾಗಿರುವುದು! ನಮ್ಮ ಗಾಂಧಿ ಅವನ ಆಶಯಕ್ಕೂ ವಿರುದ್ಧವಾಗಿ ಮಹಾತ್ಮನಾಗುವುದು ಅವನ ಆರಾಧಕರಿಂದಲೇ. ಇರುವ ಒಬ್ಬ ಗಾಂಧಿಗೆ ಕೋಟಿ ಕೋಟಿ ಗಾಂಧಿಗಳನ್ನು ಕಲ್ಪಿಸಿಕೊಂಡು, ತಮ್ಮ ಹೃದಯಗಳಲ್ಲಿ ಇಟ್ಟುಕೊಂಡು ಪೂಜಿಸಿದರಲ್ಲಾ, ಇದನ್ನು ಏನೆನ್ನಬೇಕು? ಕಾಲದ ಅಂತರದಲ್ಲಿ ಕುಳಿತುಕೊಂಡು ನಾವೀಗ ಪ್ರಶ್ನಿಸಿಕೊಳ್ಳಬೇಕಿದೆ, ಗಾಂಧಿಯೂ ಒಬ್ಬ ಮನುಷ್ಯ ತಾನೇ? ಎಲ್ಲಾ ಆರೋಪ, ಅಪವಾದಗಳಿಂದ ಹೊರತಾದ ಗಾಂಧಿ ನಮ್ಮವನಾಗಲು ಸಾಧ್ಯವೇ? ದೇವರನ್ನೂ ತಮ್ಮ ಅಳತೆಯ ಲೆಕ್ಕಾಚಾರದಲ್ಲಿ ನೋಡುವ ಮನುಷ್ಯನಿಗೆ ಗಾಂಧಿಯ ಪರಿಯ ಆರಾಧನೆ ಸಮಂಜಸವೆನಿಸಿತೋ ಏನೋ ಗೊತ್ತಿಲ್ಲ. ಗಾಂಧಿ, ನಮ್ಮ-ನಿಮ್ಮೆಲ್ಲರ ಗಾಂಧಿ, ನೀವೂ ಪ್ರೀತಿಸಿಯೂ ಬದುಕಲಾರದ, ಒಪ್ಪಿಯೂ ಅನುಸರಿಸಲಾಗದ, ಆರಾಧಿಸಿಯೂ ಅಪ್ಪಲಾಗದ, ಕಲಿತು ಕಲಿಸಲಾಗದ ಗಾಂಧಿಯೇ ಒಂದು ವಿಚಿತ್ರ. ಆದರೆ ಆತ ದೇವರಾಗದೆ, ಮಹಾತ್ಮನಾಗಿರುವುದೇ ನನಗೆ ಒಂದಿಷ್ಟು ಸಮಾಧಾನ ತಂದಿದೆ. ಸಂತನೋ, ಮಹಾಂತನೋ ಅಥವಾ ಮಹಾತ್ಮನೋ ಇವರೆಲ್ಲಾ ಯಾವುದೇ ಪ್ರಮಾಣದ ಆರಾಧನೆಗೊಳಗಾಗಿಯೂ, ಮನುಷ್ಯರ ಲೋಕಕ್ಕೆ ಸಮೀಪವಾಗಿಯೇ ಉಳಿಯುತ್ತಾರೆ. 


ಹೆಚ್ಚಿನ ಓದಿಗಾಗಿ: ‘ಗಾಂಧಿ:ಅಂತಿಮ ದಿನಗಳು’ ಮತ್ತು ‘ಗಾಂಧಿ:ಮುಗಿಯದ ಅಧ್ಯಾಯ’, ಕಣ್ವ ಪ್ರಕಾಶನ, ಬೆಂಗಳೂರು-
ಮೊಬೈಲ್ ಸಂಖ್ಯೆ: ೯೮೪೫೦೫೪೮೧

Friday, 9 August 2013

ಇಲ್ಲಿ ಮನುಷ್ಯರಿದ್ದಾರೆ, ಎಚ್ಚರಿಕೆ!!!!!

French Warrier Walter
Walter and his Dog
ಫ್ರೆಂಚ್ ಕ್ರಾಂತಿಯ ಕೇಂದ್ರ ಮನಸ್ಸಾಗಿದ್ದ ವಾಲ್ಟೇರ್ ಹುಟ್ಟು ಧನಿಕ. ಆತ ತೀರಿ ಹೋದಾಗ ಆತನ ಸಮಾಧಿಯವರೆಗೂ ಬಂದದ್ದು ಮಾತ್ರ ಆತ ಸಾಕಿದ ನಾಯಿ. ಕ್ರಾಂತಿಯ ಬೀಜ ಮರವಾಗಿ ಬೆಳೆದು ಹೂವು, ಹಣ್ಣು ಬಿಡುವ ಕಾಲಕ್ಕೆ ಅವರಿಬ್ಬರೂ ಇರಲಿಲ್ಲ. ಕ್ರಾಂತಿಯ ಸ್ಮರಣೋತ್ಸವಗಳಾದವು. ಯಾರಿಗೋ ಹಣ, ಇನ್ಯಾರಿಗೋ ಅಧಿಕಾರ, ಮತ್ಯಾರಿಗೋ ಸ್ವಾತಂತ್ರ ಸಿಕ್ಕು ದೇಶ ಸುಭಿಕ್ಷೆಯ ಬೀಡಾಯಿತು.ಆದರೆ ವಾಲ್ಟೇರ್ ಮತ್ತು ಆತನ ನಾಯಿ ಮಾತ್ರ ಧನಿಕನಾಗಿ ಹುಟ್ಟಿ ಬಡತನದ ದಾರಿದ್ರ್ಯದಲ್ಲಿ ಮರೆಯಾದರು. ಈ ಘಟನೆಯನ್ನು ನನಗೇಕೋ ಮರೆಯಲಾಗಲಿಲ್ಲ. ಇದು ಎಲ್ಲೋ ನನ್ನ ಒಟ್ಟು ಕಾವ್ಯದ ಒಳಹೂರಣವಾಗಿ ಬದುಕಿನ ದೃಷ್ಟಿಕೋನವಾಗಿ, ಗುರಿಯಾಗಿ, ಸಾಲುಗಳ ತುಂಬಾ ಗರಿಗೆದರುತ್ತದೆ. ಒಂದರ್ಥದಲ್ಲಿ ನಾಯಿಯಂತಹ ಮನುಷ್ಯರಿದ್ದರೆ ನಮ್ಮ ಕಾರುಣ್ಯದ ಲೋಕ ಅದೆಷ್ಟು ಅದ್ಭುತವಾಗಿರುತಿತ್ತು ಎಂದು ಲೆಕ್ಕ ಹಾಕುತ್ತೇನೆ. ಅಂಥವರಿಲ್ಲದಿರುವುದೇ  ಕಾವ್ಯದ ಇರುವಿಕೆಗೆ ಕಾರಣವಾಗುತ್ತದೆ. ಜಗತ್ತೆಲ್ಲವೂ ಮನುಷ್ಯರಿಂದ, ಅವರ ಶಿಖಂಡಿತನದ ನಾಟಕಗಳಿಂದ, ಜಾತಿ ಡೊಂಬರ ಟೀಕೆಗಳಿಂದ, ದೇವರಾಗುತ್ತಿರುವ ಸನಾತನಿಗಳಿಂದ, ಪಾಶಾಂಡರಿಂದ, ವಿಷ ಎರೆಯುವ ಹೆಂಗಸರಿಂದ, ಶಬ್ದಗಳ ಹಾದರ ಮಾಡುವ ಜೋಗತಿಯರಿಂದ ತುಂಬಿ ಹೋದಂತೆ ಭಾಸವಾಗುತ್ತದೆ. ನಿಮಗೆಲ್ಲ `ಇಲ್ಲಿ ಮನುಷ್ಯರಿದ್ದಾರೆ, ಎಚ್ಚರಿಕೆ’ ಎಂದು ತಿಳಿಹೇಳಬಯಸುತ್ತೇನೆ. ನಾನು ಮಾತ್ರ ಮಾತೇ ಇಲ್ಲದ, ಮಾತೃ ಸದೃಶ್ಯದ, ಕರುಣೆಯ ಕಣ್ಣುಗಳ ನಾಯಿಯನ್ನು ಹುಡುಕುತ್ತಿದ್ದೇನೆ.

Friday, 19 July 2013

TWITT IN BLOG (Kannada Blog): “ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ"-Political Parties are...

TWITT IN BLOG (Kannada Blog): “ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ"-Political Parties are...: RAGAM at Shivapara `Mahamane' Programm “ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮ...

“ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ"-Political Parties are not Question for our Nation

RAGAM at Shivapara `Mahamane' Programm

“ಪಕ್ಷಗಳು ಈ ದೇಶದ ಪ್ರಶ್ನೆಯಲ್ಲ. ಅವು ಪ್ರಜಾಸತ್ತಾತ್ಮಕತೆಯ ಜೀವಂತಿಕೆಯ ಲಕ್ಷಣಗಳು. ಪಕ್ಷಕ್ಕೂ, ಪಥಕ್ಕೂ ಸಮನ್ವಯವಿರಬೇಕಷ್ಟೇ. `ಕಾಂಗ್ರೆಸ್’(Congress) ಗಾಂಧಿ(Gandhi)ಯ ಅರ್ಥದಲ್ಲಿ ಕಾಂಗ್ರೆಸ್(Congress) ಆಗುವುದಾದರೆ, `ಜನತಾ ಪರಿವಾರ’ (Janata Parivar) ಜಯಪ್ರಕಾಶ ನಾರಾಯಣ(Jayaprakash Narayan)ರ ಚಿಂತನೆಯ ಪ್ರತಿಬಿಂಬವಾಗುವುದಾದರೆ, `ಬಿಜೆಪಿ’(BJP) ಪಾಕಿಸ್ತಾನ(Pakistan)ಕ್ಕೆ ಹೋಗಿ ಕಾವ್ಯದ ಮೂಲಕ ಮಾನವ ಸಂಬಂಧಗಳನ್ನು ಬೆಸೆಯುವ ವಾಜಪೇಯಿ(Atal Bihari Vajapeyi) ಅರ್ಥದ ಪಕ್ಷವಾಗುವುದಾದರೆ, ಪಕ್ಷಗಳು ದೇಶಕ್ಕೆ ಹೊರೆಯಲ್ಲ. ಇವುಗಳ ಅನುಸರಣೆ ಅಪರಾಧವೂ ಅಲ್ಲ. ಇವುಗಳೊಂದಿಗೆ ಘರ್ಷಣೆಯ ನಮ್ಮ ಮಾತೂ ಇಲ್ಲ.”





(ದಿ: 14/7/13, ಶಿವಪುರ, `ಮಹಾಮನೆ’ಯಲ್ಲಿ, ಶಿವಾನುಭವ ಗೋಷ್ಠಿ ಉದ್ಘಾಟಿಸುತ್ತಾ ರಾಗಂ)

Friday, 12 July 2013

ಅಭಿಪ್ರಾಯ ಎನ್ನುವದು ಅರ್ಥಹೀನ-ಹೆರ್ಮನ್ ಹೆಸ್‍(( ((Herman Hesse)

Hermann Hesse
ಹೆರ್ಮನ್ ಹೆಸ್‍(Herman Hesse) `ಸಿದ್ದಾರ್ಥ’(Siddharth) ತುಂಬಲೂ ಆತನ ಅನುಭವದ ರಸಾತಳದಿಂದ ಬಂದ ಅನೇಕ ಹೇಳಿಕೆಗಳಿವೆ. ಇಡೀ ಗ್ರಂಥವನ್ನು ಕಂಠಪಾಠ ಮಾಡಬೇಕು ಎಂದು ಓದುಗರಿಗೆ ಅನ್ನಿಸುವಂಥ ಜೀವನ ಪ್ರೀತಿಯನ್ನು ಕಾದಂಬರಿಯಲ್ಲಿ ಆತ ತುಂಬಿದ್ದಾನೆ. ಸಿದ್ಧಾರ್ಥ ಬಂದ ಹೊಸದರಲ್ಲಿ ಪೂರ್ವ ಪಶ್ಚಿಮಗಳ ಚಿಂತಕರಿಬ್ಬರೂ ಹೆಸ್ ವೈಚಾರಿಕತೆಗೆ, ಭಾವ ಸೌಂದರ್ಯಕ್ಕೆ ಮುಗ್ಧರಾದರು, ಪೂರ್ವದ ತೀವ್ರ ಆಕರ್ಷಣೆಗೆ ಒಳಗಾಗಿದ್ದ ಹೆಸ್ ಎಲ್ಲಿಯೂ ಮೈಮರೆಯುವುದಿಲ್ಲ. ಯಾವುದೇ ಗೊಡ್ಡು ಸಿದ್ದಾಂತಗಳಿಗೆ ತಲೆದೂಗುವುದಿಲ್ಲ. ಮನುಷ್ಯ ನಿರ್ಮಿತ ಯುದ್ದದಂತೆ ಹೇಯ ಕ್ರಿಯೆಯಿಂದ ಭೀತಗೊಂಡಿದ್ದ ಹೆಸ್ ಯುದ್ದವನ್ನು ಹಾಗೂ ಅದರ ಭೀತಿಯನ್ನು ಮನುಷ್ಯನ ಬಾಹ್ಯ ಹಾಗೂ ಆಂತರಿಕ ಜಗತ್ತುಗಳೆರಡರಿಂದಲೂ ಬುಡ ಸಮೇತ ನಿರ್ಮೂಲಗೊಳಿಸಲು ಯತ್ನಿಸುತ್ತಾನೆ. ಹೆಸ್ ಪಾಲಿಗೆ ಬದುಕು ಎನ್ನುವುದು ಶರಣಾಗತಿಯಲ್ಲ. ಅಂತೆಯೆ ಹರ್ಮನ್ ಹೆಸ್ ಸಿದ್ದಾರ್ಥ ಮತ್ತೆ ಮತ್ತೆ ಹೇಳುತ್ತಾನೆ. “I will no longer try to escape from Siddhartha. I will no longer devote my thoughts to atman and the sarrows of the world. I will no longer mutilate and destroy myself in order to find a secret behinf the ruins. I will no longer study Yoga-Veda, Atharva-Veda or asceticism, or any other teachings. I will learn from myself, be my own pupil, I will learn from myself the secrete of Siddhartha”.

`Siddhartha' by hermann Hesse
`ಸಿದ್ದಾರ್ಥಕಾದಂಬರಿ ಮುಗಿದರೂ ಪೂರ್ವ-ಪಶ್ಚಿಮಗಳ ಆಧ್ಯಾತ್ಮಿಕ ವಿಚಾರಗಳ ಮಂಥನದಿಂದ ಹೆಸ್ ಮೂಲಕ ಹೊರಬಂದ ವಿಚಾರಗಳನ್ನು ರೀತಿ ಸಂಗ್ರಹಿಸಬಹುದಾಗಿದೆ
1.            ಧ್ಯಾನ ಎಂಬುವುದು ತಾತ್ಕಾಲಿಕ ಪಲಾಯನದ ದಾರಿ, ಮತ್ತೇರಿಸಿ ಮೈಮರೆಸುವ ಶೆರೆಗೂ ಧ್ಯಾನಕ್ಕೂ ದೊಡ್ಡ ವ್ಯತ್ಯಾಸವಿಲ್ಲ.
2.            ಅಭಿಪ್ರಾಯ ಎನ್ನುವದು ಅರ್ಥಹೀನ. ಅದು ರುಚಿಸಿಬಹುದು ಅಥವಾ ಅರುಚಿಯಾಗಿರಲೂಬಹುದು. ಯಾರೂ ಅದನ್ನು ಒಪ್ಪಿಕೊಳ್ಳಬಹುದು ಇಲ್ಲಾ ಧಿಕ್ಕರಿಸಬಹುದು. ಅದು ಜಾಣತನದ ಮಾತಾಗಿರಬಹುದು ಅಥವಾ ಮೂರ್ಖತನದ ಅಭಿವ್ಯಕ್ತಿಯಾಗಿರಬಹುದು. ಜ್ಞಾನದ ಹಸಿವಿನಿಂದ ಬಳಲುತ್ತಿರುವವರಿಗೆ ಜಗತ್ತನ್ನು ವಿವರಿಸುವುದು ಅಭಿಪ್ರಾಯದ ಉದ್ದೇಶವಲ್ಲ. ಅದರ ಗುರಿ ತೀರ ಭಿನ್ನ, ಮನುಷ್ಯನನ್ನು ನರಳುವಿಕೆಯಿಂದ ಮುಕ್ತನನ್ನಾಗಿಸುವುದು.
3.            ಕಲಿಕೆಯಿಂದ ಏನನ್ನೂ ಕಲಿಯಲಾಗುವುದಿಲ್ಲ. ಒಂದು ಅನುಭವಕ್ಕೆ ರೂಪಕೊಡಬಹುದು, ಆದರೆ   ಅನುಭವವನ್ನು ಕಲಿಸಲಾಗದು ಅಥವಾ ಮೂಲಕ ನಮ್ಮದಾಗಿಸಿಕೊಳ್ಳಲಾಗದು.
4.            ಪ್ರೀತಿಯನ್ನು ಕೇಳಬಹುದು ಕೊಡಬಹುದು, ನಮ್ಮ ಸುತ್ತಲೂ ಬದುಕಿರುವ ಎಲ್ಲರಲ್ಲೂ ಅದರ ಸ್ವರೂಪವನ್ನು ನೋಡಬಹುದು ಆದರೆ ಒಬ್ಬರ ಕಣ್ಣು ತಪ್ಪಿಸಿ ಅದನ್ನು ಕದಿಯಲಾಗದು.
5.            ಬರೆಯುವುದು ಉತ್ತಮ, ಚಿಂತಿಸುವುದು ಅತ್ಯುತ್ತಮ: ಜಾಣ್ಮೆ ಉತ್ತಮ, ಸಹನೆ ಅತ್ಯುತ್ತಮ.
6.            ಪ್ರೀತಿಯಲ್ಲಿರುವ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಪ್ರಶಂಸಿಸದ ಹೊರತು ಒಬ್ಬರಿಂದೊಬ್ಬರು ಅಗಲಬಾರದು.
7.            ಸಭ್ಯತೆ, ಅನಾಗರಿಕತೆಗಿಂತಲೂ; ನೀರು ಕಲ್ಲಿಗಿಂತಲೂ ಹಾಗೂ ಪ್ರೀತಿ ಅಧಿಕಾರಕ್ಕಿಂತಲೂ ಶಕ್ತಿಶಾಲಿ
8.            ಜ್ಞಾನವನ್ನು ಹೇಳಬಹುದು, ಹಂಚಿಕೊಳ್ಳಬಹುದು, ತಿಳುವಳಿಕೆ ಅಥವಾ ಅನುಭವವನ್ನು ಹಂಚಿಕೊಳ್ಳಲಾಗದು, ಎಂಥ ಜ್ಞಾನಿಯೂ ಅದನ್ನು ಹಂಚಿಕೊಳ್ಳಲು ಸಿದ್ದನಾದಾಗ ಮೂರ್ಖನೆನ್ನೆಸಿಕೊಳ್ಳುತ್ತಾನೆ.






ಹೆಚ್ಚಿನ ಓದಿಗಾಗಿ `ಶಬ್ದ ಸೂತಕದಿಂದ’, ಕಣ್ವ ಪ್ರಕಾಶನ, ಬೆಂಗಳೂರು. ಮೊ-೯೮೪೫೦೫೨೪೮೧